Belagavi : ನಿಲ್ಲದ ಅಪರಾಧ ಕೃತ್ಯಗಳು ; ಠಾಣೆಯಲ್ಲಿ ಹೋಮ ಮಾಡಿ ದೈವಕ್ಕೆ ಶರಣಾದ ಪೊಲೀಸರು
ಬೆಳಗಾವಿ : ಬೆಳಗಾವಿ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರ ಕೊಲೆ, ಸುಲಿಗೆ ಸೇರಿದಂತೆ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಸ್ವತಃ ಪೊಲೀಸರು ಹೈರಾಣಾಗಿದ್ದಾರೆ. ಭಗವಂತ ನಮ್ಮ ಕಷ್ಟ ಒರಿಹರಿಸು ಎಂದು ಪೊಲೀಸ್ ಠಾಣೆಯಲ್ಲೇ ಹೋಮ, ಹವನ ಮಾಡಿದ್ದಾರೆ.
ಹೌದು ಬೆಳಗಾವಿ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಬರುವ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಭರ್ಜರಿ ಪೂಜೆ ಆಯೋಜನೆ ಮಾಡಲಾಗಿದೆ. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಕಡಿಮೆಯಾಗಲಿ ಎಂದು ಸ್ವತಃ ಪೊಲೀಸರೇ ಮುಂದೆನಿಂತು ಪೂಜೆ ಮಾಡಿಸಿದ್ದಾರೆ. ಜನರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರು ಈ ರೀತಿಯ ಕಾರ್ಯಕ್ಕೆ ಕೈ ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ಅಪರಾಧ ಕೃತ್ಯ ನಿಯಂತ್ರಣ ಮಾಡಲಾಗದೆ ನಗರದ ಮಾಳಮಾರುತಿ ಪೊಲೀಸ್ ಠಾಣೆ ಗುರುವಾರ ದೈವದ ಮೊರೆ ಹೋಗಿ ಹೋಮ- ಹವನಗಳನ್ನು ಪೂರೈಸಿ ಇಂಥ ಪೀಡೆಗಳು ತೊಲಗಲಿ ಎನ್ನುವ ಉದ್ದೇಶದಿಂದ ಹಾಲುಗುಂಬಕಾಯಿಯನ್ನು ಠಾಣೆಯ ಮುಂಭಾಗಕ್ಕೆ ಅಪ್ಪಳಿಸಿ ತಮ್ಮೊಳಗೆ ದೈವ ಭಕ್ತಿಯ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಆದರೆ ಪೊಲೀಸರ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಜನರ ಬೆನ್ನಿಗೆ ನಿಂತು ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಬೇಕಿದ್ದ ಪೊಲೀಸರೇ ಪೂಜೆ, ಹೋಮ, ಹವಣ ಎಂದು ಕುಳಿತರೆ ಇದರಿಂದ ಸಮಾಜಕ್ಕೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂಬುದು ಸ್ಪಷ್ಟ.
ಯಾವುದೇ ಪ್ರಕರಣ ಇರಲಿ ಎದೆಗುಂಡಿಗೆಯಿಂದ ಮೆಟ್ಟಿ ನಿಲ್ಲುವ ಅವಕಾಶ ಸೃಷ್ಟಿಯಾಗುವ ಸಂದರ್ಭದಲ್ಲಿ ಎಲ್ಲವನ್ನೂ ಬಿಟ್ಟು ದೇವರ ಮೊರೆ ಹೋಗಿದ್ದು ಎಷ್ಟು ಸರಿ.
ಒಟ್ಟಿನಲ್ಲಿ ಬೆಳಗಾವಿ ನಗರ ಪೊಲೀಸರ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದಾರೆ. ಪ್ರತಿದಿನವೂ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು ಜನಸಾಮಾನ್ಯರು ಭಾಗದಲ್ಲಿ ಬದುಕು ಸಾಗಿಸುವಂತಾಗಿದೆ. ಅಧಿವೇಶನ ಸಂದರ್ಭದಲ್ಲೇ ಈ ರೀತಿ ಪರಿಸ್ಥಿತಿ ಇದ್ದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಹಿರಿಯ ಅಧಿಕಾರಿಗಳು ಟಾನಿಕ್ ನೀಡುತ್ತಾರಾ ಕಾದು ನೋಡಬೇಕು.