ಕಣ್ಣು ಬಿಡುವ ಮುಂಚೆ ಕರುಳ ಬಳ್ಳಿ ಕತ್ತರಿಸಿದ ಪಾಪಿ ; ನಕಲಿ ವೈದ್ಯನ ಹಲ್ಕಾ ಕೆಲಸ
ಬೆಳಗಾವಿ : ನಕಲಿ ವೈದ್ಯನೋರ್ವ ಹಣದ ಆಸೆಯಿಂದ ಭ್ರೂಣಹತ್ಯೆ ಹಾಗೂ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ನಕಲಿ ವೈದ್ಯನ ತೋಟದಲ್ಲಿ ಮೂರು ಭ್ರೂಣಗಳ ಅವಶೇಷ ಪತ್ತೆಯಾದ ಘಟನೆ ಕಿತ್ತೂರು ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈಧ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪಿ ಅಬ್ದುಲ್ ಲಾಡಖಾನ್ ಎಂಬಾತ ಭ್ರೂಣಹತ್ಯೆ ನಡೆಸುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ತಿಗಡೊಳ್ಳಿ ಗ್ರಾಮದ ತೋಟದ ಮನೆ ಆವರಣದಲ್ಲಿ ಹೂತಿದ್ದ ಮೂರು ಭ್ರೂಣಗಳ ಅವಶೇಷಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಾನುವಾರ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಡಾ. ಮಹೇಶ್ ಕೋಣಿ, ಎಸಿ ಪ್ರಭಾವತಿ ಪಕೀರಪುರ ಹಾಗೂ ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ ಒಳಗೊಂಡ ಅಧಿಕಾರಿಗಳ ತಂಡ ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಬಳಿ
ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಕುಪ್ಪಸಗೌಡರ್
ವಿಚಾರಣೆ ವೇಳೆ ಭ್ರೂಣ ಹೂತಿಟ್ಟಿದ್ದರ ಕುರಿತು ಮಾಹಿತಿ ನೀಡಿದ್ದ. ಇತನ ಮಾಹಿತಿ ಮೆರೆಗೆ ಸ್ಥಳ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಮೂರು ಭ್ರೂಣಗಳ ಅವಶೇಷ ಪತ್ತೆಯಾಗಿದ್ದು, ನವಜಾತ ಶಿಶು ಮಾರಾಟ ಹಾಗೂ ಭ್ರೂಣ ಹತ್ಯೆ ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಭ್ರೂಣಹತ್ಯೆ ಹಾಗೂ ಮಕ್ಕಳ ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.