Select Page

ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಮತ್ತಷ್ಟು  ಸಾಧನೆಗೆ ಸ್ಫೂರ್ತಿ : ದಿಲೀಪ ಕುರಂದವಾಡೆ

ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಮತ್ತಷ್ಟು  ಸಾಧನೆಗೆ ಸ್ಫೂರ್ತಿ : ದಿಲೀಪ ಕುರಂದವಾಡೆ


ಅಥಣಿ : ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರೋತ್ಸಾಹ ಹಾಗೂ ಸಾಧಿಸುವ ಛಲ ಇದ್ದರೆ  ಸಾಧನೆ ಸುಲಭವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ  ಬೆಳಗಾವಿ ಜಿಲ್ಲಾ ಕೋಳಿ ಸಮಾಜದ ಅಧ್ಯಕ್ಷ  ದಿಲೀಪಕುಮಾರ ಕುರಂದವಾಡೆ ಹೇಳಿದರು.
 
ಅವರು ಅಥಣಿ ಪಟ್ಟಣದ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯ ಸಭಾಂಗಣದಲ್ಲಿ  ಚಿಕ್ಕೋಡಿ ವಿಭಾಗದ ಕೋಳಿ ಸಮಾಜ ಸಂಘ, ವ್ಯಾಸ ಮಹರ್ಷಿ, ನಿಜಶರಣ ಅಂಬಿಗರ ಚೌಡಯ್ಯ  ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಅಥಣಿ  ಇವರ ಸಹಯೋಗದಲ್ಲಿ  ಎಸ್ ಎಸ್ ಎಲ್ ಸಿ ಮತ್ತು  ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ  ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ  ರಾಜ್ಯಮಟ್ಟದ ಐದನೇ ಪ್ರತಿಭಾ ಪುರಸ್ಕಾರ  ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಸಂಘಟನೆಗೆ ಮತ್ತು ಸಮಾಜದ ಕಾರ್ಯಗಳು ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಚಿಕ್ಕೋಡಿ ವಿಭಾಗದಿಂದ ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಈ ಪ್ರತಿಭಾ ಪುರಸ್ಕಾರ ಸಮಾರಂಭ ಅನೇಕ ಸಾಧಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅವರ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಹೆಚ್ಚಿನ ಸಾಧನೆಗೆ ಸ್ಫೂರ್ತಿಯಾಗಿದೆ ಎಂದರು.
 
ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಬಹಳ ಅವಶ್ಯಕ. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಜ್ಞಾನ ಬಂಡಾರವನ್ನು ಸಂಪಾದಿಸಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡಿದಾಗ ಅಂದುಕೊಂಡದ್ದನ್ನು ಸಾಧಿಸಲು ಸಹಕಾರಿಯಾಗುತ್ತದೆ. ಮೊಬೈಲ್,  ಟಿವಿ  ಮತ್ತು ದುಶ್ಚಟಗಳಿಂದ ದೂರವಿದ್ದು ನಿಮ್ಮ ತಂದೆ ತಾಯಿ  ನಿಮ್ಮ  ಬಗ್ಗೆ ಕಟ್ಟಿಕೊಂಡಿರುವ ಕನಸು ನನಸು ಮಾಡುವಂತೆ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಅಬಕಾರಿ ಇಲಾಖೆಯ ಅಧೀಕ್ಷಕ  ವಿನೋದ ಢoಗೆ  ಮಾತನಾಡಿ  ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಹೇಳಿದ ಅವರು ಪ್ರೊಜೆಕ್ಟರ ಮೂಲಕ ವಿದ್ಯಾರ್ಥಿಗಳಿಗೆ  ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮತ್ತು  ವ್ಯಕ್ತಿತ್ವ ವಿಕಸನ ಹೊಂದುವ ಕೌಶಲ್ಯಗಳನ್ನು  ಅನೇಕ  ದೃಷ್ಟಾಂತಗಳೊಂದಿಗೆ ಮನಮುಟ್ಟುವಂತೆ ತಿಳಿಸಿದರು. 
  
ನಿವೃತ್ತ  ತಹಸಿಲ್ದಾರ್  ರಮೇಶ್ ಗಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯದ ವಿವಿಧ ಮೂಲೆಗಳಿಂದ  ಆಗಮಿಸಿದ್ದ 150ಕ್ಕೂ ಅಧಿಕ  ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ  ಶೇ. 85 ಕಿಂತ ಹೆಚ್ಚು ಅಂಕಗಳನ್ನು ಪಡೆದ  ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ  ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
 
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಜಯ ಪಾಟೀಲ, ಶಿಕ್ಷಣ ತಜ್ಞ ಡಿ. ಡಿ ಮೇಕನಮರಡಿ, ಡಾ. ಸುರೇಶ್ ಅಥಣಿ, ವೀರಭದ್ರ ದುಂಡಗಿ, ಯಮನಪ್ಪ ಹೆಗಡಿ, ಮಹಾಂತೇಶ ಜೆಡರ, ಶಂಕರ ಕೋಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಿಜಶರಣ ಅಂಬಿಗರ ಚೌಡಯ್ಯ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ  ಕಿಶೋರ್  ಶಿರಗೆ ಸ್ವಾಗತಿಸಿದರು. ಸಾಹಿತಿ  ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಬರ್ಲಿ  ನಿರೂಪಿಸಿದರು. ಚಿಕ್ಕೋಡಿ ವಿಭಾಗ ಕೋಳಿ ಸಮಾಜದ ಅಧ್ಯಕ್ಷ  ಎಸ್ ಕೆ ಹೊಳೆಪ್ಪನವರ ವಂದಿಸಿದರು. 

Advertisement

Leave a reply

Your email address will not be published. Required fields are marked *

error: Content is protected !!