ಪತ್ರಕರ್ತ ಪ್ರಮೋದ ಹರಿಕಾಂತಗೆ ಟ್ಯಾಗೋರ್ ಪ್ರಶಸ್ತಿ
ಉತ್ತರ ಕನ್ನಡ : ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಜಯ ಕರ್ನಾಟಕ ಹಿರಿಯ ವರದಿಗಾರ ಪ್ರಮೋದ ಹರಿಕಾಂತ ಅವರಿಗೆ ಟ್ಯಾಗೋರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರವಾರದ ಪತ್ರಿಕಾ ಭವನ ನಿರ್ವಹಣಾ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಇವರ ಜತೆಗೆ ಪಬ್ಲಿಕ್ ಟಿವಿ ವರದಿಗಾರ ನವೀನ ಸಾಗರ, ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ವಾಸುದೇವ ಗೌಡ, ವಿಸ್ತಾರ ಕ್ಯಾಮೆರಾಮನ್ ಸಾಯಿಕಿರಣ ಬಾಬ್ರೇಕರ್ ಹೀಗೆ ನಾಲ್ವರಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಶಸ್ತಿ ಪ್ರದಾನ ಮಾಡಿದರು.
ಟ್ಯಾಗೋರ್ ಪ್ರಶಸ್ತಿ ಸ್ವೀಕರಿಸಿದ ಪ್ರಮೋದ ಹರಿಕಾಂತ ಮಾತನಾಡಿ, ಮಾಧ್ಯಮಗಳ ಸ್ವರೂಪ ಬದಲಾದಂತೆ ಸತ್ಯ, ಸುಳ್ಳು ಸುದ್ದಿಗಳ ಸಂಘರ್ಷ ನಡೆಯುತ್ತಿದೆ. ವೃತ್ತಿಗೆ ಪೂರಕವಾಗಿ ಆಡಳಿತ ವ್ಯವಸ್ಥೆ ಮತ್ತು ಪತ್ರಕರ್ತರ ನಡುವೆ ಸಕಾಲಕ್ಕೆ ಮಾಹಿತಿಗಳ ವಿನಿಮಯ ಆಗುವುದರಿಂದ ಸುಳ್ಳು ಸುದ್ದಿಗಳ ಸಂಘರ್ಷ ತಪ್ಪಿಸಬಹುದು. ಪತ್ರಿಕೋದ್ಯಮ ಎಂದಿಗೂ ಸಮಾಜಕ್ಕಾಗಿ ದುಡಿಯುವ ವೃತ್ತಿಯಾಗಿದೆ. ಆಡಳಿತ ವ್ಯವಸ್ಥೆ ಮತ್ತು ಪತ್ರಕರ್ತರ ನಡುವಿನ ಸಂಬಂಧ ಉತ್ತಮವಾಗಿರಬೇಕು ಎಂದರು.
ಪತ್ರಿಕಾ ಭವನ ನಿರ್ವಹಣಾ ಸಮಿತಿ ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ, ಜಿಲ್ಲಾ ಕೇಂದ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದರ್ಶನ ನಾಯ್ಕ ವೇದಿಕೆಯಲ್ಲಿದ್ದರು. ವಿನುತಾ ಅಂಬೇಕರ್ ಪ್ರಾರ್ಥಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಿತಿ ಕಾರ್ಯದರ್ಶಿ ಸುನೀಲ ನಾಯ್ಕ ಹಣಕೋಣ ಕಾರ್ಯಕ್ರಮ ನಿರೂಪಿಸಿದರು. ಜುಲೈ ನಲ್ಲಿ ನಡೆಯಬೇಕಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಂಕೋಲಾ ಶಿರೂರು ದುರಂತ ಹಿನ್ನೆಲೆಯಲ್ಲಿ ತಡವಾಗಿ ನಡೆಸಲಾಸಿತು.