
12 ವರ್ಷ ಕಾಯ್ದ ಕನಸು ನುಚ್ಚುನೂರು ; ಬಾಣಂತಿ ಸಾವಿನ ಹಿಂದಿದೆ ಕಣ್ಣೀರ ಕಥೆ…!

ಬೆಳಗಾವಿ : ಮದುವೆಯಾದ 12 ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದ್ದು, ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಮೃತಪಟ್ಟ ಘಟನೆ ಮಂಗಳವಾರ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
.ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್ (31) ಮೃತ ದುರ್ದೈವಿ. ಕಳೆದ ಹನ್ನೆರಡು ವರ್ಷಗಳ ಹಿಂದೆ ನಿಲಜಿ ಗ್ರಾಮದ ನಿಂಗಾಣಿ ಪಾಟೀಲ ಎಂಬುವವರ ಜೊತೆ ಮದುವೆಯಾಗಿತ್ತು.
ಹನ್ನೆರಡು ವರ್ಷಗಳ ನಂತರ ಅಂಜಲಿ ಗರ್ಭಿಯಾದ ಹಿನ್ನಲೆಯಲ್ಲಿ ಮನೆಯಲ್ಲಿ ಸಂತೋಷ ಮನೆ ಮಾಡಿತ್ತು. ಇನ್ನೇನು ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಬಾಣಂತಿ ಸಾವು ಬರಸಿಡಿಲಿನಂತೆ ಅಪ್ಪಳಿಸಿದೆ.
ಹೆರಿಗೆಗೆಂದು ಸೋಮವಾರ ಬಿಮ್ಸ್ ಆಸ್ಪತ್ರೆಗೆ ಗರ್ಭಿಣಿ ಮಹಿಳೆ ಅಂಜಲಿ ದಾಖಲಾಗಿದ್ದಳು. ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನಲೆಯಲ್ಲಿ ವೈದ್ಯರು ಸಿಜರಿನ್ ಮೂಲಕ ಹೆರಿಗೆ
ಮಾಡಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಆರೋಗ್ಯವಾಗಿದ್ದ ಅಂಜಲಿಗೆ ಬಿಪಿಯಲ್ಲಿ ಏರುಪೇರು ಆಗ ಹಿನ್ನಲೆಯಲ್ಲಿ ಸಾವಣಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಣಂತಿ ಅಂಜಲಿ ಸಾವಿಗೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು, ಹೆರಿಗೆ ವಾರ್ಡ್ ಪಕ್ಕದಲ್ಲಿ ಮೃತ ಬಾಣಂತಿಯನ್ನು ನೆನೆದು ಅವರ ತಾಯಿ ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬದವರು,
ಮೊದಲಿಗೆ ವೈದ್ಯರು ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ಹೇಳಿದ್ದರು. ಆಮೇಲೆ ಸಿಜರಿನ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿಲ್ಲ. ಹಾಗಾಗಿ, ಅಂಜಲಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿದರು.