ಗೃಹ ರಕ್ಷಕ ದಳ ಇಲಾಖೆಯ ಗುಂಪುಗಾರಿಕೆಗೆ ಕಡಿವಾಣ ಎಂದೂ ?
ಬೆಳಗಾವಿ ಜಿಲ್ಲಾ ಗೃಹ ರಕ್ಷಕ ದಳದ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸ್ವಂತ ಖರ್ಚಿನಿಂದ ಸಾಕಷ್ಟು ಬದಲಾವಣೆ ತಂದಿದ್ದರೂ ಕಿರಣ್ ನಾಯ್ಕ ಅವರಿಗೆ ಕೆಲವರು ಗುಂಪುಗಾರಿಕೆ ಮಾಡಿ ರಾಜಕೀಯ ಮಾಡುತ್ತಿರುವುದು ನಿಷ್ಠಾವಂತ ಹೋಮ್ ಗಾಡ್೯ಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು. ಬೆಳಗಾವಿ ಜಿಲ್ಲಾ ಗೃಹ ರಕ್ಷಕ ದಳದ ಇಲಾಖೆಯ ಬಗ್ಗೆ ವಿನಾಕಾರಣ ಸುಳ್ಳು ಅರ್ಜಿ ನೀಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡಂಟ್ ಕಿರಣ ನಾಯ್ಕ ಆರಕ್ಷಕ ದಳದ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಗೃಹ ರಕ್ಷಕದಳ ಸಂಸ್ಥೆಯಲ್ಲಿ ಗೃಹ ರಕ್ಷಕರು ನಿಷ್ಕಾಮ ಸೇವಕರಾಗಿರುತ್ತಾರೆ. ಗೃಹ ರಕ್ಷಕರು ಸರಕಾರದಿಂದ ವೇತನ ಪಡೆಯುವ ಖಾಯಂ ಸಿಬ್ಬಂದಿಗಳಾಗಿರುವುದಿಲ್ಲ. ಕೇವಲ ತುರ್ತು ಸಮಯದಲ್ಲಿ ಬಂದೋಬಸ್ತ ಕರ್ತವ್ಯಗಳಿರುವಾಗ ಮಾತ್ರ ಗೌರವ ಧನ ಎಂದು ಪಡೆಯುತ್ತಾರೆ. ಆದ್ದರಿಂದ ಗೃಹ ರಕ್ಷಕದಳ ಸದಸ್ಯತ್ವ ಹೊಂದಿದ ಮಾತ್ರಕ್ಕೆ ಯಾವುದೇ ರೀತಿ ಜೀವನ ಆಧಾರ ಇರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಗೃಹ ರಕ್ಷಕ ದಳ ಒಂದು ಇಷ್ಕಾಮ ಸೇವೆಯಾಗಿದ್ದು, ಈ ಸಂಸ್ಥೆಯಲ್ಲಿ ಅವರ ವೃತ್ತಿ ಜೀವನದ ಜತೆಗೆ ಸಮಾಜ ಸೇವೆ ಮಾಡ ಬಯಸುವವರಿಗೆ ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಗೃಹ ರಕ್ಷಕ ಸೇವಾ ಅವಧಿಯು ಪ್ರತಿ ಮೂರು ವರ್ಷಕ್ಕೊಮ್ಮೆ ನವೀಕರಣ ಪ್ರಕ್ರಿಯೆ ಮಾಡಬೇಕಾಗಿರುತ್ತದೆ. ಕಳೆದ 15 ವರ್ಷಗಳಿಂದ ನವೀಕರಣ ಮಾಡಿಲ್ಲ ಎಂದು ಕಮಾಂಡಂಟ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಷಯದ ಕುರಿತು ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿಮ್ಮ ಆದೇಶದ ಮೇರೆಗೆ ಹಾಗೂ ಘಟಕಾಧಿಕಾರಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅವರ ಶಿಫಾರಸ್ಸು ಹಾಗೂ ಕಚೇರಿಯ ಬೋಧಕರ ಪರಿಶೀಲನೆಗೆ ನವೀಕರಣ ಮಾಡಲಾಗಿದೆ. ಆದರೂ ಕೆಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಗಾವಿ ಗೃಹ ರಕ್ಷಕ ದಳದ ಘಟಕಾಧಿಕಾರಿಗಳು ಅವರ ವೈಯಕ್ತಿಕ ಸ್ವಾರ್ಥಕ್ಕಾಗಿ ಮತ್ತು ಅವರ ಕರ್ತವ್ಯದ ಲೋಪದೋಷವನ್ನು ಮರೆ ಮಾಚುವ ದುರುದ್ದೇಶದಿಂದ ಗೃಹ ರಕ್ಷಕರನ್ನು ಪ್ರಚೋದಿಸಿ ಮಾನಸಿಕವಾಗಿ ನಮಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಆರಕ್ಷಕ ದಳದ ಮಹಾ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಕಿರಣ್ ಆರೋಪಿಸಿದ್ದಾರೆ.
ಗೃಹ ರಕ್ಷಕ ದಳ ಸಮವಸ್ತ್ರಧಾರಿ ಇಲಾಖೆಯಾಗಿದ್ದು, ಇಲ್ಲಿ ಎಲ್ಲ ಕರ್ತವ್ಯಗಳು ಸರಕಾರದ ನಿಯಮಾನುಸಾರ ಹಾಗೂ ಕಾನೂನು ಬದ್ಧವಾಗಿ ನಡೆಯುತ್ತವೆ. ಸಮಾಲೋಪನೆಗೊಂಡ ಗೃಹ ರಕ್ಷಕರು ಮಾಧ್ಯಮ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಬಳಿ ಸುಳ್ಳು ದೂರು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಹಿಂದಿನ ಘಟಕಾಧಿಕಾರಿಗಳಾದ ಬಸವರಾಜ ಹಂಡಗಿ, ಸಂಜಯ ನಿಂಬಾಳ್ಕರ್, ಮಹಾಂತೇಶ ಕಿತ್ತೂರ ಸೇರಿದಂತೆ ಇನ್ನಿತರರು ಸಮಾಲೋಪನೆಗೊಂಡ ಗೃಹ ರಕ್ಷಕರು ಗುಂಪುಗಾರಿಕೆ ಮಾಡಿ ಇಲಾಖೆಗೆ ಕಪ್ಪು ಚುಕ್ಕೆ ಬರುವಂತೆ ಮಾಡಿರುತ್ತಾರೆ ಎಂಬ ಮಾಹಿತಿ ಬಂದಿರುವುದರಿಂದ ಇವರ ಮೇಲೆ ತನಿಖೆ ಪ್ರಕ್ರಿಯೆಯಲ್ಲಿದೆ ಎಂದು ನೀಡಲಾದ ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ, ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಗೃಹಮಂತ್ರಿ, ಚುನಾವಣಾ ಆಯೋಗ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಈ ಹಿಂದೆಯೂ ಕಮಾಂಡಂಟ್ ಹಾಗೂ ಪ್ರಭಾರ ಕಮಾಂಡಂಟ್ ಆಗಿ ಕಾರ್ಯ ನಿರ್ವಹಿಸಿದ ಹೆಚ್ಚುವರಿ ಅಧೀಕ್ಷಕರಿಗೂ ಇದೇ ರೀತಿ ಕಿರುಕುಳ ನೀಡಿದ್ದಾರೆ. ಆದ್ದರಿಂದ ಇಂಥ ಸುಳ್ಳು ದೂರುಗಳನ್ನು ನೀಡಿದಾಗ ಕೂಲಂಕಷವಾಗಿ ಪರಿಶೀಲಿಸಿ ನಮ್ಮಂಥ ಅಧಿಕಾರಿಗಳಿಗೆ ನ್ಯಾಯ ದೊರಕಿಸಿ ಕೊಟ್ಟು ಕಿರುಕುಳ ನೀಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ಕಿರಣ ನಾಯ್ಕ ಮನವಿ ಮಾಡಿದ್ದಾರೆ.