ಹದಗೆಟ್ಟ ರಸ್ತೆಯಿಂದ ಕಂಗಾಲಾದ ಬೈಲಹೊಂಗಲ ಜನ
ಬೈಲಹೊಂಗಲ : ಪಟ್ಟಣದ ತೋಟಗಾರಿಕೆ ಇಲಾಖೆಯಿಂದ ಮುರಗೋಡ ಗ್ರಾಮದವರೆಗೆ ನಿರ್ಮಿಸಿದ ಅಳ್ನಾವರ-ಬೆಟಗೇರಿ ರಾಜ್ಯ ಹೆದ್ದಾರಿ ರಸ್ತೆಯನ್ನು ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ರಸ್ತೆ ಕೆಲವೇ ವರ್ಷಗಳಲ್ಲಿ ಹಾಳಾಗಿರುವುದರಿಂದ ನಾಗರಿಕರು ಅಧಿಕಾರಿಗಳ ವಿರುದ್ಧ ನಿತ್ಯ ಹಿಡಿಶಾಪ ಹಾಕುವಂತಾಗಿದೆ.
ಈ ರಸ್ತೆಯನ್ನು 2019 ರಲ್ಲಿ ಸುಮಾರು 17 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕಾಮಗಾರಿ ಪ್ರಾರಂಭ ಹಂತದಲ್ಲಿಯೇ ಕಳಪೆ ಕಾಮಗಾರಿ ಕುರಿತು ನಾಗರಿಕರು ಹಲವಾರು ಬಾರಿ ದೂರು ನೀಡಿ, ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. 5 ವರ್ಷದಲ್ಲೇ ಈ ರಸ್ತೆಯಲ್ಲಿ ಹೊಂಡಗಳು ನಿರ್ಮಾಣಗೊಂಡು ಕಳಪೆ ಮಟ್ಟದ ಕಾಮಗಾರಿಗೆ ಹಿಡಿದ ಕೈ ಗನ್ನಡಿಯಾಗಿದೆ. ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕಳಪೆ ಕಾಮಗಾರಿ ಮೂಲಕ ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಹದಗೆಟ್ಟ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗಿದೆ. ಅಜಾಗೃತೆಯಿಂದ ವಾಹನ ಚಲಾಯಿಸಿದರೆ ಪ್ರಾಣಕ್ಕೆ ಕುತ್ತು ತಂದೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಿದರೆ ಬೇಜಬ್ದಾರಿ ಉತ್ತರ ನೀಡುತ್ತಾರೆ.
ರಸ್ತೆಯ ಅಕ್ಕಪಕ್ಕದ ಎರಡು ಬದಿಯಲ್ಲಿ ನಿರ್ಮಿಸಿದ ಪುಟ್ ಪಾತ್ ಕಸ-ಕಡ್ಡಿಗಳಿಂದ ತುಂಬಿದೆ. ವಾಯುವಿಹಾರಕ್ಕೆ ತೆರಳುವ ನಾಗರಿಕರು ಛೀಮಾರಿ ಹಾಕುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ತಗ್ಗು-ಗುಂಡಿಗಳನ್ನು ಶಾಶ್ವತವಾಗಿ ಮುಚ್ಚುತ್ತಾರೆ ಅಥವಾ ಕಾಟಾಚಾರಕ್ಕೆ ಕೆಲಸ ಮಾಡುತ್ತಾರಾ ಎಂಬುದನ್ನು ನೋಡಬೇಕು.
ಅಳ್ನಾವರ-ಬೆಟಗೇರಿ ರಸ್ತೆ (ಮುರಗೋಡ ರಸ್ತೆ) ರಾಜ್ಯ ಹೆದ್ದಾರಿ ರಸ್ತೆಯ ವಾರ್ಷಿಕ ನಿರ್ವಾಹಣೆ ಕಾಮಗಾರಿ ಮಾಡುತ್ತಿದ್ದು, ಮಳೆ ನಿಂತ ಮೇಲೆ ತಗ್ಗು-ಗುಂಡಿಗಳನ್ನು ಡಾಂಬರೀಕರಣ ಮಾಡಲಾಗುವುದು.
ಬಸವರಾಜ ಹಾಲಗಿ
ಸಹಾಯಕ ಕಾರ್ಯನಿರ್ವಾಹಕ ಇಂಜೀನೀಯರ.
ಪಟ್ಟಣದಿಂದ ಮುರಗೋಡ ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿ ರಸ್ತೆ ಕೆಲವೇ ವರ್ಷಗಳಲ್ಲಿ ಹಾಳಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈ ಗನ್ನಡಿಯಾಗಿದೆ. ಒಂದು ಕಣ ್ಣಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ತಗ್ಗು ಗುಂಡಿ ಬಿದ್ದ ರಸ್ತೆಯಲ್ಲಿ ಮಣ್ಣು ಹಾಕಿ ಮತ್ತಷ್ಟು ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು.
ಗುಂಡಪ್ಪ ಸನದಿ
ನಾಗರಿಕರು, ಬೈಲಹೊಂಗಲ


