
ಅರಭಾವಿ ಕ್ಷೇತ್ರದಿಂದಲೇ ನಿರ್ಮಾಣವಾಗುತ್ತಾ ಹೊಸ ದಾಖಲೆ ; ಸಾಹುಕಾರ್ ಗುರಿ ಏನು…?

ಗೋಕಾಕ: ಬರುವ ಸೆಪ್ಟಂಬರ್ ನಿಂದ ಅಕ್ಟೋಬರ್ ವರೆಗೆ ನಡೆಯುವ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಮ್ಮ ಅರಭಾವಿ ಕ್ಷೇತ್ರದಿಂದಲೇ ಅತೀ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆಯಲು ಅಗತ್ಯವಿರುವ ಸಿದ್ಧತೆಗಳನ್ನು ನಡೆಸುವಂತೆ ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಬುಧವಾರ ಸಂಜೆ ನಗರದ ಎನ್‌ಎಸ್‌ಎಫ್ ಕಾರ್ಯಾಲಯದ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಭಾವಿ ಕ್ಷೇತ್ರದಿಂದಲೇ ಕನಿಷ್ಟ 75 ಸಾವಿರ ಮತದಾರರನ್ನು ಸದಸ್ಯತ್ವದ ನೋಂದಣಿ ಯನ್ನು ಮಾಡಿಸುವ ಮೂಲಕ ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ನಮ್ಮವರು ಗೆಲ್ಲಲು ಈಗಿನಿಂದಲೇ ಪ್ರಯತ್ನ ಮಾಡುವಂತೆ ಅವರು ಹೇಳಿದರು.
ಬಿಜೆಪಿಯು ಶಿಸ್ತಿನ ಪಕ್ಷ. ಕಾರ್ಯಕರ್ತರೇ ನಮಗೆ ಆಸ್ತಿ. ಇಲ್ಲಿ ಕಾರ್ಯಕರ್ತರಿಗಿರುವ ಗೌರವ ಬೇರೇ ಯಾವ ಪಕ್ಷದಲ್ಲೂ ಇಲ್ಲ. ಇದರಿಂದಾಗಿಯೇ ನಮ್ಮ ಹೆಮ್ಮೆಯ ಪಕ್ಷವಾಗಿರುವ ಬಿಜೆಪಿಯು ಇಂದು ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ್ ದಯಾಳ್ ಉಪಾಧ್ಯೆಯವರ ತ್ಯಾಗ ಮತ್ತು ಪರಿಶ್ರಮದಿಂದ ವಿಶ್ವದಲ್ಲಿಯೇ ನಮ್ಮ ಸರ್ಕಾರ ರಾರಾಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ನಮ್ಮ ಭಾರತ ದೇಶವು ಪ್ರಪಂಚದಲ್ಲಿಯೇ ಶಕ್ತಿಶಾಲಿ ರಾಷ್ಟçವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದು ತಿಳಿಸಿದರು.
ಸೆ. 2 ರಂದು ಪ್ರಧಾನಿ ಮೋದಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ. ಎರಡು ಹಂತಗಳಲ್ಲಿ ಈ ಅಭಿಯಾನ ಜರುಗಲಿದೆ. ಸೆ.2 ರಿಂದ 25 ರ ತನಕ ಒಂದು ಹಂತವಾದರೆ, ಎರಡನೇ ಹಂತವು ಅ.1 ರಿಂದ 15 ರವರೆಗೆ ನಡೆಯಲಿದ್ದು, ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 6 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಎರಡು ಹಂತಗಳಲ್ಲಿ ಇದನ್ನು ಮಾಡಲಾಗುತ್ತಿದೆ. ಕಳೆದ ಅವಧಿಯಲ್ಲಿ ಇಡೀ ರಾಜ್ಯದಲ್ಲಿಯೇ ಅರಭಾವಿ ಕ್ಷೇತ್ರವು ಸದಸ್ಯತ್ವ ಅಭಿಯಾನದಲ್ಲಿ ಹೊಸ ಭಾಷ್ಯೆ ಬರೆದಿತ್ತು. ಈ ಬಾರಿಯೂ ಈ ದಾಖಲೆಯನ್ನು ಮಾಡುವ ಮೂಲಕ ರಾಜ್ಯದಲ್ಲಿಯೇ ಅರಭಾವಿಯ ಕ್ಷೇತ್ರದ ಹೆಸರು ರಾರಾಜಿಸಬೇಕು ಎಂದರು.
ವೇದಿಕೆಯಲ್ಲಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಭಾರಿ ದಾದಾಗೌಡ ಬಿರಾದಾರ, ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ಪ್ರಶಾಂತ ಅಮ್ಮಿನಭಾವಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕಾ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಈಗಿಂದಲೇ ಕಾರ್ಯಪ್ರವೃತ್ತರಾಗಬೇಕು.
ಬಾಲಚಂದ್ರ ಜಾರಕಿಹೊಳಿ
ಶಾಸಕರು ಅರಭಾವಿ