ಕೊನೆಗೂ ಉಸಿರು ನಿಲ್ಲಿಸಿದೆ ಮಹಿಳೆ ; ಕಾಡಂಚಿನ ಜನರ ಕಣ್ಣೀರ ಕಥೆ
ಬೆಳಗಾವಿ : ಖಾನಾಪುರ ತಾಲೂಕಿನ ಕಾಡಂಚಿನಲ್ಲಿರುವ ಅಮಗಾಂವ ಗ್ರಾಮದಲ್ಲಿ ಕಟ್ಟಿಗೆ ಸ್ಟ್ರೇಚರ್ ನಲ್ಲಿ ಐದು ಕಿ.ಮೀ. ಹೊತ್ತೊಯ್ದು ಆ್ಯಂಬುಲೇನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿ ಆಗದೇ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾಳೆ.
ಚಿಕಿತ್ಸೆ ಫಲಿಸದೆ ಬೆಳಗಾವಿ ಕೆ ಎಲ್ ಇ ಆಸ್ಪತ್ರೆಯಲ್ಲಿ ಹರ್ಷದಾ ಘಾಡಿ(42) ಮೃತಪಟ್ಟಿದ್ದಾರೆ. ತೀವ್ರ ಜ್ವರ ಹಿನ್ನೆಲೆಯಲ್ಲಿ ಜುಲೈ 18ರಂದು ಆಸ್ಪತ್ರೆಗೆ ದಾಖಲಿಸಲು ಹರ ಸಾಹಸ ಪಡಲಾಗಿತ್ತು. ಕಟ್ಟಿಗೆಯಲ್ಲಿ ಸ್ಟ್ರೇಚರ್ ಮಾಡಿಕೊಂಡು ಚಿಕಲೆ ವರೆಗೂ ಗ್ರಾಮಸ್ಥರು ಹೊತ್ತುಕೊಂಡು ಬಂದಿದ್ದರು.
ಐದು ಕಿ. ಮೀ. ಸುರಿಯುತ್ತಿದ್ದ ಭಾರಿ ಮಳೆಯಲ್ಲಿ ಪ್ರಾಣ ಉಳಿಸಲು ಕಸರತ್ತು ನಡೆಸಿದ್ದರು. ಆದರೆ, ಗ್ರಾಮಸ್ಥರ ಹೋರಾಟ ಕೊನೆಗೂ ಫಲಿಸಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಹರ್ಷದಾ ಇಂದು ಕೊನೆಯುಸಿರೆಳೆದಿದ್ದಾರೆ.
ಮೃತ ಮಹಿಳೆಯ ಪತಿ ಹರಿಶ್ಚಂದ್ರ ಘಾಡಿ ಮಾತನಾಡಿ, 18ರಂದು ಮಧ್ಯಾಹ್ನ 1 ಗಂಟೆಗೆ ನನ್ನ ಪತ್ನಿಯ ಬಿಪಿ ಲೋ ಆಗಿ ಕುಸಿದು ಬಿದ್ದರು. ಈ ವೇಳೆ ಗ್ರಾಮಸ್ಥರು ಕೂಡಿಕೊಂಡು ಕಷ್ಟಪಟ್ಟು ಸ್ಟ್ರೇಚರ್ ನಲ್ಲಿ ಚಿಕಲೆ ಗ್ರಾಮದವರೆಗೂ ಹೊತ್ತುಕೊಂಡು ಬಂದೇವು. ಆ ಬಳಿಕ ಆಂಬುಲೇನ್ಸ್ ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದೇವು.
ಅಲ್ಲಿ ಹಿಡಿಯಲಿಲ್ಲ, ಕೊನೆಗೆ ಕೆಎಲ್ಇ ಆಸ್ಪತ್ರೆಗೆ ಸೇರಿಸಿದೇವು. ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಮೃತರಾಗಿದ್ದಾರೆ. ನಮ್ಮೂರಲ್ಲಿ ಬಹಳಷ್ಟು ಸಮಸ್ಯೆ ಇದೆ. ವಿದ್ಯುತ್, ರಸ್ತೆ, ಮೊಬೈಲ್ ನೆಟವರ್ಕ್ ಕೂಡ ಇಲ್ಲ. ಪ್ರತಿನಿತ್ಯ ಸಮಸ್ಯೆಯಲ್ಲೆ ಬದುಕುವ ಸ್ಥಿತಿಯಿದೆ ಎಂದು ಅಳಲು ತೋಡಿಕೊಂಡರು.
ಮುಖ್ಯ ರಸ್ತೆಯಿಂದ 12 ಕಿ.ಮೀ. ಒಳಗೆ ದಟ್ಟ ಅರಣ್ಯ ಪ್ರದೇಶದಲ್ಲಿ ಅಮಗಾಂವ ಗ್ರಾಮವಿದೆ. 73 ಕುಟುಂಬಗಳು ಇದ್ದು, 560 ಜನಸಂಖ್ಯೆ ಇದೆ. ರೇಶನ್ ಏನಾದರೂ ಬೇಕಾದರೆ ಕಾಡಿನಲ್ಲಿ ನಡೆದುಕೊಂಡು ಚಿಕಲೆ ಇಲ್ಲವೇ ಜಾಂಬೋಟಿಗೆ ಬರಬೇಕು.
ಹೀಗೆ ಬಿಟ್ಟು ಬಿಡದೇ ಮಳೆ ಸುರಿದರೆ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿಯಿದೆ. ಇನ್ನು ತುರ್ತು ಆರೋಗ್ಯ ಸಮಸ್ಯೆ ಉದ್ಭವಿಸಿದಾಗ ಆಸ್ಪತ್ರೆಗೆ ಸೇರಿಸಲು ಹರ ಸಾಹಸ ಪಡಬೇಕು ಎಂದರು.