ಬೈಲಹೊಂಗಲ : ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗ
ಬೈಲಹೊಂಗಲ: ಕುಡಿತದ ಅಮಲಿನಲ್ಲಿ ಮಗನೊಬ್ಬ ತಾಯಿಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಮಹಾದೇವಿ ಗುರಪ್ಪ ತೊಲಗಿ(70) ಎಂದು ಗುರುತಿಸಲಾಗಿದೆ.34 ವರ್ಷದ ಈರಣ್ಣ ಗುರಪ್ಪ ತೊಲಗಿ ಕೊಂದ ಆರೋಪಿ.
ಕೊಲೆ ಆರೋಪಿ ಈರಣ್ಣ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿದ್ದ, ಒಂದು ವರ್ಷದ ಹಿಂದೆ ಹೆಂಡತಿ ಜೊತೆ ಜಗಳ ಮಾಡಿಕೊಂಡು ಬಂದು ಉಡಿಕೇರಿಯಲ್ಲಿ ತಾಯಿ ಜೊತೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದ. ಜೊತೆಗೆ ಕುಡಿತದ ದಾಸನಾಗಿದ್ದ.
ತಾಯಿ ಮಹಾದೇವಿ ಹೆಸರಿನಲ್ಲಿರುವ ಒಂದು ಎಕರೆ ಜಮೀನನ್ನು ನನ್ನ ಹೆಸರಿಗೆ ಮಾಡಿ ಕೊಡು ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದ. ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದ ಈರಣ್ಣ ಹೊಲ ಬರೆದು ಕೊಡು ಎಂದು ಆಕ್ರೋಶಗೊಂಡು ಮತ್ತಷ್ಟು ಮದ್ಯಪಾನ ಮಾಡಬೇಕು ಹಣ ಕೊಡು ಎಂದು ಪೀಡಿಸಿ, ತಾಯಿಯ ಜೊತೆ ಜಗಳವಾಡಿದ್ದಾನೆ
ಈ ವೇಳೆ ಒಲೆಯಲ್ಲಿರುವ ಕಟ್ಟಿಗೆಯಿಂದ ತಾಯಿ ತಲೆಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ಗೋಡೆಗೆ ಡಿಕ್ಕಿ ಹೊಡೆದು ಬಿದ್ದಿದ್ದಾಳೆ. ಬಿದ್ದ ಹೊಡೆತಕ್ಕೆ ತಲೆಯಿಂದ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಡಿ ವೈ ಎಸ್ ಪಿ ರವಿ ನಾಯ್ಕ, ಪಿ ಎಸ್ ಐ ಗಳಾದ ನಂದೀಶ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆರೋಪಿ ಈರಣ್ಣ ನ್ನು ಬಂಧಿಸಲಾಗಿದೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.