ಬೆಳಗಾವಿ : ಮಸೀದಿ ಅಜಾನ್ ವಿರುದ್ಧ ಮೊಳಗಿತು ಹನುಮಾನ ಚಾಳಿಸಾ
ಬೆಳಗಾವಿ : ಮಸೀದಿ ಅಜಾನ್ ವಿರುದ್ಧದ ಹೋರಾಟಕ್ಕೆ ಇಳಿದಿರುವ ಶ್ರೀರಾಮ ಸೇನೆ ಕಾರ್ಯಕರ್ತರು ಇಂದು ನಗರದ ಆರ್ ಟಿ ಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಆರತಿ ಹಾಗೂ ಹನುಮಾನ್ ಚಾಳಿಸಾ ಪಠಣದ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ಅಜಾನ್ ವಿರುದ್ಧ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಸಂಘಟನೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಸುಮಾರು 500 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅಜಾನ್ ನಿಂದ ಉಂಟಾಗುವ ಶಬ್ದ ಮಾಲಿನ್ಯ ಜನರಿಗೆ ಕಿರಿ ಕಿರಿ ಉಂಟು ಮಾಡುತ್ತದೆ ಎಂಬುದು ಶ್ರೀರಾಮಸೇನೆ ವಾದ.
ಸೋಮವಾರ ಬೆಳಗಿನ ಜಾವ ಹನುಮಾನ ಮಂದಿರದಲ್ಲಿ ಸೇರಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಸ್ಪೀಕರ್ ನಲ್ಲಿ ಭಜನೆ ಹಾಡು ಹಾಕಿದರು. ಜೊತೆಗೆ ಆರತಿ ಮಾಡಿ, ಹನುಮಾನ ಚಾಲಿಸಾ ಪಠಣ ಮಾಡಿದರು. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ಪರಿಶೀಲನೆ ನಡೆಸಿದರು.