ಅಥಣಿ ಭಾಗದ ಜನತೆಗೆ ಶಾಸಕ ಕುಮಠಳ್ಳಿ ಸಿಹಿಸುದ್ದಿ
ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ, ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ತಂಡದಿಂದ ಸ್ಥಳ ಸಮೀಕ್ಷೆ
ಅಥಣಿ : ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ನಡೆಸುತ್ತಿರುವ ಅಥಣಿ ನಾಗರಿಕರಿಗೆ ಮತ್ತೊಂದು ಸಂತಸದ ವಿಚಾರ ಎನ್ನುವಂತೆ ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪನೆಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಅಥಣಿ ಮತಕ್ಷೇತ್ರದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ಸರ್ಕಾರಕ್ಕೆ ಶಾಸಕ ಮಹೇಶ ಕುಮಠಳ್ಳಿ ಅವರು ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ತಂಡ ಸೋಮವಾರ ತಾಲೂಕಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿತು.
ಕೆ.ಎಸ್.ಐ.ಐ.ಡಿ.ಸಿ ತಾಂತ್ರಿಕ ಸಲಹೆಗಾರ, ಬ್ರಿಗೇಡಿಯರ್ ಡಿ.ಎಂ ಪೂರ್ವಿಮಠ ಒಳಗೊಂಡ ತಂಡ ತಾಲೂಕಿನ ಯಲಹಡಲಗಿ ಗ್ರಾಮದ ಸರ್ಕಾರಿ ಜಾಗದ ಪರಿಶೀಲನೆ ನಡೆಸಿತು. ಕಿರು ವಿಮಾನ ನಿಲ್ದಾಣಕ್ಕೆ ಈ ಸ್ಥಳ ಸೂಕ್ತವಾಗಿದ್ದು, ವಿಮಾನಗಳ ಲ್ಯಾಂಡಿಂಗ್ ವ್ಯವಸ್ಥೆಗಾಗಿ ಸಮೀಪದಲ್ಲಿರುವ ಹೈ ವೋಲ್ಟೇಜ್ ವಿದ್ಯುತ್ ಸಂಪರ್ಕ ಮತ್ತು ನೀರಾವರಿ ಯೋಜನೆಯ ಕಾಲುವೆಗಳ ಬಗ್ಗೆ ವರದಿ ಮತ್ತು ನೀಲನಕ್ಷೆ ನೀಡುವಂತೆ ತಹಶೀಲ್ದಾರ ಸುರೇಶ ಮುಂಜೆ ಅವರಿಗೆ ಮೌಖಿಕವಾಗಿ ತಿಳಿಸಿದೆ.
ಅಥಣಿ ತಾಲೂಕಿನ ಪೂರ್ವಭಾಗದ ಯಲಿಹಡಲಗಿ ಗ್ರಾಮದ ಸರ್ವೆ ನo. 33 ರಲ್ಲಿ 319 ಎಕರೆ ಸರ್ಕಾರಿ ಗೈರಾಣಾ ಜಮೀನು ಇದೆ. ವಿಮಾನ ನಿಲ್ದಾಣಕ್ಕೆ ಸುಮಾರು 200 ಎಕರೆ ಜಾಗ ಬೇಕಾಗುತ್ತದೆ. ಕೆ.ಎಸ್.ಐ.ಐ.ಡಿ.ಸಿ ತಾಂತ್ರಿಕ ಸಲಹೆಗಾರ – ಬ್ರಿಗೇಡಿಯರ್ ಡಿ.ಎಂ ಪೂರ್ವಿಮಠ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅವರಿಗೆ ಅಗತ್ಯ ಮಾಹಿತಿ ಒದಗಿಸಲಾಗುವುದು
ಸುರೇಶ ಮುಂಜೆ,
ತಹಶೀಲ್ದಾರ ಅಥಣಿ
ಕ್ಷೇತ್ರ ಅಭಿವೃದ್ಧಿ ನಿಟ್ಟಿನಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಮಹತ್ವದ ಕಾರ್ಯ ಪ್ರಾರಂಭವಾಗಿದ್ದು ಸಂತೋಣದ ಸಂಗತಿ. ತ್ವರಿತ ಕಾಮಗಾರಿ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ.
ಮಹೇಶ್ ಕುಮಠಳ್ಳಿ
ಅಥಣಿ ಶಾಸಕ