ಹೆಸರು ತಪ್ಪಾಗಿ ಹೇಳಿದ್ದಕ್ಕೆ ಲಕ್ಷ್ಮಣ ಸವದಿ ಬೆನ್ನಿಗೆ ಹೊಡೆದ ರಮೇಶ್ ಜಾರಕಿಹೊಳಿ
ಬೆಳಗಾವಿ : ರಾಜಕೀಯ ವೇದಿಕೆಯಲ್ಲಿ ಹಾವು, ಮುಂಗುಸಿಯಂತಿರುವ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಇಂದು ಒಂದೇ ವೇದಿಕೆಯಲ್ಲಿ ಕುಳಿತು ಒಬ್ಬರಿಗೊಬ್ಬರು ನಗೆ ಚಟಾಕಿ ಹಾರಿಸಿದರು. ಈ ಸಂದರ್ಭದಲ್ಲಿ ಆತ್ಮೀಯವಾಗಿ ಸವದಿ ಬೆನ್ನು ಚಪ್ಪರಿಸಿದ ಸಾಹುಕಾರ್ ಆತ್ಮೀಯ ನಗೆ ಬೀರಿದರು.
ಹೌದು ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಿನ್ನಲೆ ಕಾಗವಾಡ ಪಟ್ಟಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸುದ್ದಿಘೋಷ್ಠಿ ನಡೆಸಲಾಗಿತ್ತು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡುತ್ತ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬದಲಿಗೆ ರಮೇಶ್ ಜಾರಕಿಹೊಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ರಮೇಶ್ ಜಾರಕಿಹೊಳಿ ಹೆಸರು ಸರಿಪಡಿಸುವಂತೆ ಸವದಿ ಬೆನ್ನಿಗೆ ಹೊಡೆದರು. ನಂತರ ಮಾತನಾಡುತ್ತ. ಇವನು ಕರ್ಪೂರ ಇದ್ದ ಹಾಗೆ ವಾಸನೆ ಇರುತ್ತದೆ. ಹಿಂದೆ ಉಸ್ತುವಾರಿ ಸಚಿವ ಆಗಿದ್ದ ಆ ಕಾರಣಕ್ಕೆ ಈಗಲೂ ಇದೇ ಹೆಸರು ಬರುತ್ತಿದೆ ಎಂದರು.
ಪಕ್ಷದ ಸೂಚನೆಯಂತೆ ಕೆಲಸ ಮಾಡುವೆ – ರಮೇಶ್ ಜಾರಕಿಹೊಳಿ
ಕಾಗವಾಡ : ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಿಪ್ಪಾಣಿ ಕ್ಷೇತ್ರದ ಕೈ ನಾಯಕರನ್ನು ಒಗ್ಗೂಡಿಸಿ ಕೆಲಸ ಮಾಡಿದ್ದೆ. ಆದರೆ ಈ ಬಾರಿ ಬಿಜೆಪಿ ಪಕ್ಷದಲ್ಲಿರುವೆ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯವಾಗುವುದಿಲ್ಲ. ಪಕ್ಷ ಸೂಚಿಸುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಗುರುವಾರ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಇವರು. ಈ ಬಾರಿ ನಿಪ್ಪಾಣಿ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಗೆಲುವಿಗಾಗಿ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಯಾವುದೇ ಮುಖಂಡರ ಜೊತೆ ಭಿನ್ನಾಭಿಪ್ರಾಯ ಇಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದು ನಮ್ಮ ಗುರಿ ಎಂದು ಅಭಿಪ್ರಾಯಪಟ್ಟರು.
ನಿಪ್ಪಾಣಿ ಬಿಜೆಪಿ ಸಮಾವೇಶಕ್ಕೆ ಗೈರಾದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇವರು. ಪೂರ್ವ ನಿಗದಿತ ಕಾರ್ಯಕ್ರಮ ಹಿನ್ನಲೆಯಲ್ಲಿ ನಿಪ್ಪಾಣಿ ಸಮಾವೇಶಕ್ಕೆ ಗೈರಾಗಿದ್ದೆ. ಈ ಕುರಿತು ಪಕ್ಷದ ಉಸ್ತುವಾರಿಗಳ ಗಮನಕ್ಕೆ ತಂದಿದ್ದೆ. ಪಕ್ಷದ ಹೈಕಮಾಂಡ್ ಸೂಚಿಸುವ ವ್ಯಕ್ತಿ ಪರ ನಾನು ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.
***********
ಕಡಾಡಿ ಆರೋಪಕ್ಕೆ ಜಾರಕಿಹೊಳಿ ಪ್ರತಿಕ್ರಿಯೆ
ಗೋಕಾಕ್ ಕ್ಷೇತ್ರದಲ್ಲಿ ಸ್ಥಳೀಯ ಸಂಸದರನ್ನು ದೂರವಿಟ್ಟು ಗಟ್ಟಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಾಸಕ ರಮೇಶ್ ಜಾರಕಿಹೊಳಿ ಚಾಲನೆ ನೀಡಿದ್ದು ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂಬ ವಿಚಾರವಾಗಿ ಮಾತನಾಡಿದ ಇವರು. ಪೈಪ್ ಲೈನ್ ಕಾಮಗಾರಿ ಪ್ರಾರಂಭಿಸುವ ಹಿನ್ನಲೆಯಲ್ಲಿ ನಾನು ಪೂಜೆ ಮಾಡಿರುವೆ. ಮುಂದಿನ ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದಲೇ ಕಾಮಗಾರಿಗೆ ಚಾಲನೆ ಕೊಡಿಸಲಿದ್ದೇನೆ ಎಂದರು.
***********************
ಬೆಳಗಾವಿಯಲ್ಲಿ 15 ಕ್ಷೇತ್ರ ಗೆಲ್ಲುತ್ತೇವೆ – ಲಕ್ಷ್ಮಣ ಸವದಿ
ಬರುವ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಹೋರಾಟ ನಡೆಸಲಿದೆ. ಅದರಲ್ಲಿ 15 ಕ್ಕೂ ಅಧಿಕ ಕ್ಷೇತ್ರ ಗೆಲ್ಲುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದರು.
ಕಾಗವಾಡದಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಇವರು. ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರರಗೆ ಭರ್ಜರಿ ಜನಬೆಂಬಲ ಸಿಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂಬರುವ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದರು.
***************