ಬೆಳಗಾವಿ : ಬಾಕಿ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸ್ಟೋನ್ ಕ್ರಷರ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಆಕ್ರೋಶಗೊಂಡು ಹೆಸ್ಕಾಂ ಅಧಿಕಾರಿಗಳಿಬ್ಬರನ್ನು ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿದ ಆರೋಪ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಕೇಳಿಬಂದಿದೆ.
ನಗರದ ಕುವೆಂಪುನಗರದಲ್ಲಿರುವ ಚನ್ನರಾಜ್ ಹಟ್ಟಿಹೊಳಿ ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೆಸ್ಕಾಂ ಎಇಇ ದೀಪಕ್ ಡಿ. ಹಾಗೂ ಸೆಕ್ಷನ್ ಆಫೀಸರ್ ರಾಜು ಚವ್ಹಾಣ್ ಹಲ್ಲೆಗೊಳಗಾದ ಅಧಿಕಾರಿಗಳು ಎಂದು ತಿಳಿದುಬಂದಿದೆ.
ಚನ್ನರಾಜ್ ಹಟ್ಟಿಹೊಳಿ ಅವರ ಆಪ್ತ ಪ್ರಮೋದ್ ಜಾಧವ್ ಅವರಿಗೆ ಸೇರಿದ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಲಕ್ಷ್ಮೀ ಸ್ಟೋನ್ ಕ್ರಷರ್ಗೆ ಸುಮಾರು ಮೂರು ತಿಂಗಳಿನಿಂದ 77,360 ರೂ.ವಿದ್ಯುತ್ ಬಿಲ್ ಬಾಕಿ ಉಳಿದಿತ್ತು ಎನ್ನಲಾಗಿದೆ. ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಗುರುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.
ಇದರಿಂದ ಆಕ್ರೋಶಗೊಂಡು ಎಇಇ ದೀಪಕ್ ಹಾಗೂ ಸೆಕ್ಷನ್ ಆಫೀಸರ್ ರಾಜು ಚವ್ಹಾಣ್ ಅವರನ್ನು ಶುಕ್ರವಾರ ಬೆಳಗ್ಗೆ ನಿವಾಸಕ್ಕೆ ಕರೆಸಿಕೊಳ್ಳಲಾಗಿತ್ತು. ಈ ವೇಳೆ ವಿದ್ಯುತ್ ಸಂಪರ್ಕ ಏಕೆ ಕಡಿತಗೊಳಿಸಲಾಗಿದೆ ಎಂದು ಪ್ರಶ್ನಿಸಿ ಅವಾಚ್ಯವಾಗಿ ನಿಂದಿಸಿ, ಎದೆ ಮೇಲಿನ ಶರ್ಟ್ ಹಿಡಿದು ಹಲ್ಲೆ ನಡೆಸಲಾಗಿದೆ ಎಂದು ಎಇಇ ದೀಪಕ್ ಆರೋಪಿಸಿದ್ದಾರೆ.
ಘಟನೆ ಕುರಿತು ಹೆಸ್ಕಾಂ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ನೀಡುವ ಸಾಧ್ಯತೆ ಇದ್ದು, ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಎಪಿಎಂಸಿ ಪೊಲೀಸ್ ಠಾಣೆಗೆ ಜಮೆಗೊಂಡಿರುವ ಹೆಸ್ಕಾಂ ಸಿಬ್ಬಂದಿಗಳು ಚನ್ನರಾಜ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





