ಮೈಸೂರು : 2028ರ ವಿಧಾನಸಭೆ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕಾಂಗ್ರೆಸ್ನಲ್ಲಿ ಮತ್ತೆ ಮುನ್ನಲೆಗೆ ಬರುತ್ತಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತೊಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಅಧಿಕಾರಕ್ಕೆ ಬಂದರೆ 2028ರಲ್ಲಿ ಡಿ.ಕೆ. ಶಿವಕುಮಾರ್ (Dk Shivakumar) ಮುಖ್ಯಮಂತ್ರಿಯಾಗಲಿ (Cm Post) ಎಂದು ಹೇಳಿದ್ದಾರೆ.
ಈ ಹಿಂದೆ 2028ರಲ್ಲಿ ತಮಗೂ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದೆ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿ, ಇದೀಗ ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಡಿಕೆ ಶಿವಕುಮಾರ್ ಅವರ ಪ್ರಯತ್ನ ಯಶಸ್ವಿಯಾದರೆ ಅವರು ಮುಖ್ಯಮಂತ್ರಿಯಾಗಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ತಾವು ಈ ಹಿಂದೆ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಿದ್ದು ನಿಜ, ಆದರೆ ತಾನೇ ಮುಖ್ಯಮಂತ್ರಿ ಆಗಬೇಕು ಎಂದು ಎಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನನಗೆ ಇನ್ನೂ ವಯಸ್ಸಿದೆ, ನಾನು ಕಾಯುತ್ತೇನೆ” ಎಂಬ ಅರ್ಥದಲ್ಲಿ ತಮ್ಮ ನಿಲುವನ್ನು ಅವರು ವಿವರಿಸಿದ್ದಾರೆ.
ಇದೇ ವೇಳೆ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಮಾಡನಾಡಿದ ಸತೀಶ್ ಜಾರಕಿಹೊಳಿ, ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಬಜೆಟ್ನಲ್ಲಿ ನಿಗದಿಯಾಗಿರುವ ಯೋಜನೆಗಳಿಗೆ ಹಣ ಒದಗಿಸಲಾಗುತ್ತದೆ. ಹೊಸ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡುವ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ರಾಜ್ಯ ಹಣಕಾಸು ಇಲಾಖೆ ಇತ್ತೀಚೆಗೆ ವೆಚ್ಚದಲ್ಲಿ ಸಂಯಮ ವಹಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿರುವ ವರದಿಗಳಿವೆ.
ಇನ್ನು ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆ ವಿಚಾರದಲ್ಲೂ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸೆಪ್ಟೆಂಬರ್ 9 ಮತ್ತು 10ರಂದು ಅವರ ಕುಟುಂಬದವರು ಹಾಗೂ ಆಪ್ತರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಇಡಿ ಶೋಧ ನಡೆಸಿತು. ವಿದೇಶಿ ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಸತೀಶ್ ಜಾರಕಿಹೊಳಿ ಆರೋಪಗಳನ್ನು ತಳ್ಳಿಹಾಕಿದ್ದು, ಅಧಿಕಾರಿಗಳು ನೋಟಿಸ್ ಬಂದರೆ ದಾಖಲೆಗಳಿಂದ ಉತ್ತರಿಸುವುದಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಿದಾಗಲೂ ಯಾವುದೇ ಅಂತರವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ತಂಡದ ನಾಯಕ, ತಾವು ಉಪನಾಯಕ ಎಂದು ತಮ್ಮ ಸಂಬಂಧವನ್ನು ಅವರು ವಿವರಿಸಿದ್ದಾರೆ.





