
ಶಾಂತ ಮನಸ್ಸಿನಿಂದ ಪರೀಕ್ಷೆ ಎದುರಿಸಿ : ಸಿಇಒ ರಾಹುಲ್ ಶಿಂಧೆ

ಬೆಳಗಾವಿ ವಾಯ್ಸ್ : ಮಾರ್ಚ-ಎಪ್ರೀಲ್ 2025ರ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ತಮ್ಮೆಲ್ಲರಿಗೂ ಹೃದಯಪೂರ್ವಕ ಶುಭಾಶಯಗಳು. ಈಗಾಗಲೇ ತಾವೆಲ್ಲರೂ ಸಾಕಷ್ಟು ಅಧ್ಯಯನ ಮಾಡಿ ಪರೀಕ್ಷೆಯ ತಯಾರಿ ಮಾಡಿಕೊಂಡಿದ್ದು, ಪರೀಕ್ಷೆ ಬರೆಯಲು ಸಿದ್ಧರಾಗಿರುವಿರಿ ಆದ್ದರಿಂದ ಮೊದಲಿಗೆ ಯಾವುದೇ ಭಯ, ಅತಂಕ, ಒತ್ತಡಕ್ಕೆ ಒಳಪಡದೇ ಪರೀಕ್ಷೆಯನ್ನು ಬರೆಯಿರಿ.
ಶಾಂತ ಮನಸ್ಸಿನಿಂದ, ಧನಾತ್ಮಕ ಭಾವನೆಯಿಂದ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿರಿ. ಪರೀಕ್ಷಾ ಕೊಠಡಿಯಲ್ಲಿ ತಮಗೆಕೊಟ್ಟ ಪ್ರಶ್ನೆ ಪತ್ರಿಕೆಯನ್ನು ಮೊದಲು ಶಾಂತ ಚಿತ್ತರಾಗಿ ಓದಿರಿ. ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಿ ಹಾಗೂ ತಮಗೆ ಸುಲಭ ಎಂದೆನಿಸುವ ಪ್ರಶ್ನೆಗಳಿಗೆ ಮೊದಲು ಉತ್ತರಗಳನ್ನು ಬರೆಯಿರಿ. ತದನಂತರ ಉಳಿದ ಪ್ರಶ್ನೆಗಳನ್ನು ಮತ್ತೆ ಸರಿಯಾಗಿ ಓದಿ ಉತ್ತರಗಳನ್ನು ಶಾಂತಚಿತ್ತದಿಂದ ಬರೆಯಿರಿ. ಪರೀಕ್ಷೆ ಬರೆಯುವಾಗ ಪ್ರಶ್ನೆಗಳನ್ನು ಉತ್ತರಿಸಲು ಸರಿಯಾದ ಸಮಯವನ್ನು ನಿಗದಿಪಡಿಸಿಕೊಂಡು ಬರೆದರೆ ನಿಗದಿತ ಅವಧಿಯಲ್ಲಿ ಉತ್ತರ ಪತ್ರಕೆಯನ್ನು ಪೂರ್ಣಗೊಳಿಸಬಹುದು.
ನಮ್ಮ ಜಿಲ್ಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಯುವಂತೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಭಯ, ಆತಂಕ, ತೊಂದರೆ ಆಗದಂತೆ ಸುಗಮ ಹಾಗೂ ಸರಳವಾಗಿ ಪರೀಕ್ಷೆ ನಡೆಯುವಂತೆ ಎಲ್ಲಾ ರೀತಿಯ ಅವಶ್ಯಕ ಸಿದ್ಧತೆ ಮಾಡಲಾಗಿದೆ ಹಾಗೂ ನಮ್ಮ ಜಿಲ್ಲೆಯು ಅತ್ಯುತ್ತಮ ಫಲಿತಾಂಶ ಪಡೆಯಲು
ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಅಧಿಕಾರಿಗಳು ಕಾರ್ಯತತ್ಪರರಾಗಿರುತ್ತಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾಲ್ಲೂಕಿಗೆ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ ವತಿಯಿಂದ ಪ್ರೋತ್ಸಾಹಿಸಲಾಗುವುದು. ಹಾಗೂ ಶೈಕ್ಷಣಿಕ ಸ್ಥಳಗಳಿಗೆ ಪ್ರವಾಸವನ್ನು ಹಮ್ಮಿಕೊಳ್ಳಲಾಗುವುದು.
ಆದ್ದರಿಂದ ಆತ್ಮೀಯ ವಿದ್ಯಾರ್ಥಿಗಳೇ ಆತ್ಮಸೈರ್ಯದಿಂದ ಈ ಪರೀಕ್ಷೆಯನ್ನು ಬರೆದು ಯಶಸ್ವಿಯಾಗುವಿರೆಂಬ ವಿಶ್ವಾಸವಿದೆ. ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಇದು ಉತ್ತಮ ಅವಕಾಶವಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುವಿರೆಂಬ ಆಶಾಭಾವವಿದೆ. ಎಲ್ಲರಿಗೂ ಶುಭವಾಗಲಿ -ರಾಹುಲ ಶಿಂಧೆ.