ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 23 ನೇ ಘಟಿಕೋತ್ಸವ
ಬೆಳಗಾವಿ : ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿವಿಧ ಮಹತ್ವದ ಸಾಧನೆಗಳನ್ನು ಮಾಡುವುದರ ಮೂಲಕ ವಿಶ್ವದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ. ಇತರೆ ದೇಶಗಳಿಗಿಂತ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರೀವಾಗಿದೆ ಎಂದು ಮದ್ರಾಸ್ ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ವಿ. ಕಾಮಕೋಟಿ ಅವರು ತಿಳಿಸಿದರು.
ಬೆಳಗವಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿಟಿಯು 23 ನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ, ಘಟಿಕೋತ್ಸವ ಸಮಾರಂಭವು ವಿಶಿಷ್ಟ, ವಿಶೇಷವಾದ ಕ್ಷಣವಾಗಿದೆ. ಪದವೀಧರರಿಗೆ ಇದು ಸಾಧನೆಯ ದಿನವಾಗಿದೆ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಮಾತ್ರ ಈ ಹಂತ ತಲುಪಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಪದವಿ ನಂತರದಲ್ಲಿ ಬರುವ ವೃತ್ತಿಪರ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಜ್ಜಾಗಬೇಕು ಇದರಿಂದ ಯಶಸ್ಸಿನ ಮಾರ್ಗ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈಗಾಗಲೇ ಭಾರತ ಡಿಜಿಟಲ್ ಯುಗಕ್ಕೆ ಬಂದು ನಿಂತಿದೆ. ತಂತ್ರಜ್ಞಾನ ಬಳಕೆಯಲ್ಲಿ ಈಗ ನಾವೆಲ್ಲರೂ ಒಂದು ಭಾಗವಾಗಿದ್ದೇವೆ, ಉದಾಹರಣೆಗೆ ಯುಪಿಐ ಪೇಮೆಂಟ್ ಸಿಸ್ಟಮ್, ಆಧಾರ್ ಅಳವಡಿಕೆ, ಆರೋಗ್ಯ ಸೇತು, ಇವೆಲ್ಲವೂ ಸಾರ್ವಜನಿಕರಿಗೆ, ಸಮಾಜದ ದುರ್ಬಲ ಅಂಚಿನಲ್ಲಿರುವ ವರ್ಗಗಳಿಗೆ ಸುಲಭ ಮಾರ್ಗವಾಗಿ ಅನುವು ಮಾಡಿಕೊಟ್ಟಿವೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಎಂ. ಸಿ. ಸುಧಾಕರ ಮಾತನಾಡಿ, ಉದ್ಯೋಗಿಗಳಿಗೆ ಜ್ಞಾನಕ್ಕಿಂತ ಕೌಶಲ ಬಹಳ ಮುಖ್ಯ. ವಿಶ್ವವಿದ್ಯಾಲಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಪಠ್ಯಕ್ರಮದ ಜೊತೆಗೆ ಕೈಗಾರಿಕೆಗಳ ಜೊತೆಗೆ ಸಂಬಂಧ ಬೆಳೆಸುವಂತೆ ವಾತಾವರಣ ಸೃಷ್ಟಿಸಬೇಕು. ಅದು ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದರು.
ಅತೀ ಹೆಚ್ಚು 13 ಚಿನ್ನದ ಪದಕ ಪಡೆದ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ವಿದ್ಯಾರ್ಥಿ ಮದಕಶಿರಾ ಚಿನ್ಮಯ ವಿಕಾಸ ಹಾಗೂ ತಲಾ 7 ಚಿನ್ನದ ಪದಕ ಪಡೆದ ಬೆಂಗಳೂರಿನ ಬಿಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ
ಅಭಿಷೇಕ. ಜಿ., ಬೆಂಗಳೂರಿನ ಸರ್ ಎಂವಿಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುಡಿಕಲ್ ಸಾಯಿ ವಂಶಿ, ಬಳ್ಳಾರಿಯ ಬಿಐಟಿಎಂ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಕೆ.ಆರ್. ಸಂಪತ್ ಕುಮಾರ ಸೇರಿದಂತೆ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಪದಕ ವಿತರಿಸಲಾಯಿತು. ಇದೇ ವೇಳೆ 42,545 ಎಂಜಿನಿಯರಿಂಗ್, 1003 ಬಿಆರ್ಕ್, 584 ಪಿಎಚ್‍ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಕುಲಸಚಿವರಾದ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಟಿ.ಎನ್ ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ. ಎ ಸ್ವಪ್ನ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಗೌರವ ಡಾಕ್ಟರೇಟ್ ಪದವಿ ಪ್ರಧಾನ – ಶ್ರೀ ಆದಚುಂಚನಗಿರಿ ಮಹಾಸಂಸ್ಥಾನದ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಅನುಪಸ್ಥಿತಿಯಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ವಿ.ಎಸ್. ಮೂರ್ತಿ ಹಾಗೂ ಮೈಸೂರು ಮೆಕ್ಯಾನಿಕ್ ಟೈಲ್ ಕಂಪನಿ ಲಿ. ಬೆಂಗಳೂರು ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರಿನ ಹೆಗ್ಗುಂಜಿ ರಾಜೀವ್ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾದ ಎಚ್.ಎಸ್.ಶೆಟ್ಟಿ ಅವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡಿ ಗೌರವಿಸಲಾಯಿತು.
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಈಗಾಗಲೇ ಸಾಕಷ್ಟು ವಿಕಸನ ಹೊಂದಿದೆ. ಸದ್ಯ ದೇಶದ ಆರ್ಥಿಕತೆ ವಿಶ್ವದಲ್ಲಿ ೫ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲಿ ದೇಶ ೩ ಸ್ಥಾನಕ್ಕೆ ಏರಲಿದೆ ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳ ಪಾಲುದಾರಿಕೆ ಅವಶ್ಯವಾಗಿದೆ.
ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲರು


