
ಬಾಗಪ್ಪ ಹರಿಜನ ಕೊಲೆ ರಹಸ್ಯ ಬಿಚ್ಚಿಟ್ಟ ಹಂತಕರು

ವಿಜಯಪುರ : ಬಾಗಪ್ಪ ಹರಿಜನ ಕೊಲೆ ಪ್ರಕರಣ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಕೊಲೆ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೊಲೆ ಪ್ರಕರಣದ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಬಾಗಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ
ಪ್ರಕಾಶ್ ಮೇಲಿನಕೇರಿ, ರಾಹುಲ್ ತಳಕೇರಿ, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಎಂಬುವವರನ್ನು ಬಂಧಿಸಲಾಗಿದೆ.
ಇವರೆಲ್ಲರನ್ನು ವಿಚಾರಣೆಗೆ ಒಳಪಡಿಸಿದಾಗ ಬಾಗಪ್ಪ ಹರಿಜನನ್ನು ಕೊಲೆ ಮಾಡಲು ಕಾರಣವೇನೆಂದು ಹೇಳಿದ್ದಾರೆ. ವಕೀಲ ರವಿ ಮೇಲಿನಕೇರಿ ಕೊಲೆ ನಂತರ ನನಗೆ ಬಾಗಪ್ಪ ಕಿರುಕುಳ ನೀಡುತ್ತಿದ್ದನು. ರವಿ ಗಳಿಸಿರುವ ಆಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದನು.
ಇಲ್ಲವೇ 10 ಕೋಟಿ ಹಣ ನೀಡು, ಅದೂ ಇಲ್ಲದಿದ್ದರೆ ರವಿ ಪತ್ನಿಯನ್ನು ಕಳುಹಿಸು ಅಂತ ಬಾಗಪ್ಪ ಹರಿಜನ ಕಿರುಕುಳ ನೀಡುತ್ತಿದ್ದನು. ಹೀಗಾಗಿ ನಾವು ಆತನನ್ನು ಎತ್ತಿಬಿಟ್ಟೇವು” ಎಂದು ಪಿಂಟ್ಯಾ ಮತ್ತು ಆತನ ಸಹಚರರು ಖಾಕಿ ಎದುರು ಬಾಯಿ ಬಿಟ್ಟಿದ್ದಾರೆ.
ರವಿ ಮೇಲಿನಕೇರಿ ಕೊಲೆ ಆಗಿದ್ದೇಗೆ : ರವಿ ಮೇಲಿನಕೇರಿ ಮೂಲತಃ ಇಂಡಿ ತಾಲೂಕಿನ ಅಗರಖೇಡ್ ಗ್ರಾಮದವರು. ರವಿ ಬಾಗಪ್ಪನ ಪತ್ನಿಯ ಕಡೆಯಿಂದ ಸಂಬಂಧಿಯೂ ಆಗಿದ್ದರು. ಕಳೆದ ಹಲವಾರು ವರ್ಷಗಳಿಂದ ಬಾಗಪ್ಪನ ಜೊತೆಗೆ ಗುರುತಿಸಿಕೊಂಡಿದ್ದರು.
ಸಣ್ಣಪುಟ್ಟ ವ್ಯಾಜ್ಯಗಳಲ್ಲಿ ಜಗಳಗಳಲ್ಲಿ ಭಾಗಿಯಾಗಿ ಮದ್ಯಸ್ಥಿಕೆ ವಹಿಸಿ ಪರಿಹರಿಸುತ್ತಿದ್ದರು. ನಂತರ ಲಾ ಓದಿ ವಕೀಲರಾಗಿ ವಿಜಯಪುರದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮಕ್ಕಳು ಸಹೋದರರ ಜೊತೆಗೆ ವಾಸವಿದ್ದರು.
ಈ ನಡುವೆ ರವಿ ಮೇಲಿನಕೇರಿ ಮತ್ತು ಬಾಗಪ್ಪ ಹರಿಜನ ನಡುವೆ ಬಿರುಕು ಮೂಡಿತ್ತು. ಅದಕ್ಕೆ ಕಾರಣ ರವಿ ಮೇಲಿನಕೇರಿ ಜೀವನ ಶೈಲಿ ಬದಲಾಗಿದ್ದು. ಜಮೀನು ಖರೀದಿ ಮಾಡಿದ್ದು, ಬಾಗಪ್ಪನ ಗಮನಕ್ಕೆ ಬರುತ್ತದೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ರವಿ ಜೊತೆಗೆ ಬಾಗಪ್ಪ ಪಾಲುದಾರಿಕೆ ಹೊಂದಿದ್ದನಂತೆ. ಅದರಲ್ಲಿ ಬಂದ ಲಾಭದ ಹಂಚಿಕೆಯಲ್ಲಿ ಬಾಗಪ್ಪ ಹಾಗೂ ರವಿ ಮಧ್ಯೆ ತಕರಾರು ಬಂದಿದೆ. ಇದೇ ವೇಳೆ ರವಿ ಮೇಲಿನಕೇರಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾನೆ.
ಜಮೀನು, ಮನೆ, ಸೈಟ್ಗಳನ್ನು ಮಾಡಿಕೊಂಡಿದ್ದಾನೆ ಎಂದು ಬಾಗಪ್ಪ ಹರಿಜನ ರವಿ ಮೇಲೆ ಹಲ್ಲು ಮಸೆಯುತ್ತಿದ್ದನು.
ಈ ವೇಳೆ ರೌಡಿ ಶೀಟರ್ ತುಳಸಿರಾಮ ಹರಿಜನ ಹಾಗೂ ರವಿ ಮೇಲಿನಕೇರಿಗೂ ಜಗಳವಾಗಿತ್ತು. ರವಿ ಮೇಲಿನಕೇರಿ ಹಾಗೂ ಆತನ ಸಹೋದರರು ಸಹಚರರು ಸೇರಿ ತುಳಸಿರಾಮ ಹರಿಜನನ್ನು ಹೊಡೆದಿದ್ದಾರೆ. ಈ ಸಿಟ್ಟು ತುಳಸಿರಾಮಗೆ ಇತ್ತು.
ಒಂದು ದಿನ ತುಳಸಿರಾಮ ಬಾಗಪ್ಪ ಹರಿಜನಗೆ ಭೇಟಿಯಾಗಿ ರವಿ ಮೇಲಿನಕೇರಿಯಿಂದ ನನಗೆ ಸಮಸ್ಯೆಯಾಗುತ್ತಿದೆ. ನೀವು ಆತನ ಬೆಂಬಲಕ್ಕೆ ಇದ್ದೀರಿ ಅಂತ ರವಿ ಬಿಂಬಿಸುತ್ತಿದ್ದಾನೆ ಎಂದು ಕೇಳುತ್ತಾನೆ. ಆಗ ಬಾಗಪ್ಪ ನಾನು ರವಿ ಮೇಲಿನಕೇರಿಗೆ ಬೆಂಬಲ ನೀಡಲ್ಲ. ನೀನು ಏನು ಬೇಕಾದರೂ ಮಾಡಿಕೋ ಎಂದು ತುಳಸಿರಾಮಗೆ ಬಾಗಪ್ಪ ಹೇಳಿದ್ದನು.