ಜೆಡಿಎಸ್ ನತ್ತ ಮುಖ ಮಾಡಿದರಾ ಪ್ರತಾಪ್ ಸಿಂಹ ; ಚನ್ನಪಟ್ಟಣ ಅಖಾಡದಲ್ಲಿ ಟ್ವಿಸ್ಟ್
ಬೆಂಗಳೂರು : ಚನ್ನಪಟ್ಟಣ ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು ಮಾಜಿ ಸಂಸದ ಪ್ರತಾಪ್ ಸಿಂಹ ಜೆಡಿಎಸ್ ನತ್ತ ಮುಖ ಮಾಡಿದರಾ ಎಂಬ ಮಾತು ಕೇಳಿಬರುತ್ತಿವೆ.
ಹೌದು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನಿರಾಕರಿಸಿ ಅವರ ಸ್ಥಾನಕ್ಕೆ ಯದುವೀರ್ ಅವರನ್ನು ತರಲಾಗಿತ್ತು. ಈ ಬೆಳವಣಿಗೆಯಿಂದ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಪ್ರತಾಪ್ ಸಿಂಹ ಈಗ ಮತ್ತೊಂದು ಸುತ್ತಿನ ಗರ್ಜನೆಗೆ ಸಜ್ಜಾಗಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಗೆಲ್ಲುವ ಮೂಲಕ ಈಗ ಕೇಂದ್ರ ಸಚಿವರಾಗಿದ್ದಾರೆ. ಇವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಬಂದೊದಗಿದೆ.
ಸಧ್ಯ ಚನ್ನಪಟ್ಟಣ ಕ್ಷೇತ್ರದ ಮೇಲೆ ಮಾಜಿ ಸಚಿವ ಬಿಜೆಪಿಯ ಮುಖಂಡ ಸಿ.ಪಿ ಯೋಗೇಶ್ವರ್ ಮುಂಚೂಣಿಯಲ್ಲಿ ಇರುವಾಗಲೇ ಜೆಡಿಎಸ್ ಹೊಸ ದಾಳ ಉರುಳಿಸಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರು ತೇಲಿಬಿಡುವ ಮೂಲಕ ತಂತ್ರ ಹೆಣೆದಿದೆ. ಇದಕ್ಕೆ ಯೋಗೇಶ್ವರ್ ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ಈ ಎಲ್ಲಾ ಬೆಳವಣಿಗೆ ಮಧ್ಯೆ ಪ್ರತಾಪ್ ಸಿಂಹ ಜೆಡಿಎಸ್ ನತ್ತ ಮುಖ ಮಾಡಿದರಾ ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ಕುಮಾರಸ್ವಾಮಿ ಜೊತೆ ಮಾತನಾಡಿರುವ ಪ್ರತಾಪ್ ಸಿಂಹ ಚನ್ನಪಟ್ಟಣ ಟಿಕೆಟ್ ನೀಡುವುದಾದರೆ ಜೆಡಿಎಸ್ ಸೇರುವ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.