ಕಿಕ್ಕಿರಿದು ತುಂಬಿದ್ದ ಬಸ್ನ ಲಾಭ ಪಡೆದ ಕಳ್ಳ ; 50 ಗ್ರಾಂ ಚಿನ್ನಾಭರಣ ದೋಚಿ ಪರಾರಿ
ಕಡೋಲಿ : ಸರ್ಕಾರವು ತನ್ನ ‘ಶಕ್ತಿ’ ಯೋಜನೆಯ ಅಡಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿದ್ದರಿಂದ ಕರ್ನಾಟಕದ ಅನೇಕ ಮಹಿಳೆಯರು ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ರಯಾಣವನ್ನು ಆನಂದಿಸುತ್ತಿದ್ದಾರೆ.
ಆದರೆ, ಬೆಳಗಾವಿ ನಗರದಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಕಳ್ಳರು ತಮ್ಮ ಕೈಚಳಕ ತೊರಿಸಿದ್ದಾರೆ. ಮಹಿಳೆಯ 50 ಗ್ರಾಂ ಚಿನ್ನಾಭರಣ, ಪರ್ಸ್ ಅನ್ನು ದೋಚಿಕೊಂಡು ಹೋಗಿದ್ದರಿಂದ ಬಸ್ನಲ್ಲಿ ಉಚಿತ ಪ್ರಯಾಣ ಈ ಮಹಿಳೆಗೆ ದುಬಾರಿ ಪರಿನಮಿಸಿದೆ. ಬಸ್ನಲ್ಲಿದ್ದ ಜನಸಂದಣಿಯನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯರ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ನಿವಾಸಿ 30 ವರ್ಷದ ಗೃಹಿಣಿ ಆರತಿ ಹನುಮಂತ್ ಕಡೋಲ್ಕರ್ ಮಂಗಳವಾರ (ಜೂನ್ 20) ತನ್ನ ಪೋಷಕರು ಮತ್ತು ಒಂದೂವರೆ ವರ್ಷದ ಮಗಳೊಂದಿಗೆ ಕಡೋಲಿ ಗ್ರಾಮದಿಂದ ಬೆಳಗಾವಿ ನಗರಕ್ಕೆ NWKRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರೆಲ್ಲ ನೆಹರೂನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬರಲು ಬಸ್ನಿಂದ ಇಳಿದರು. ಸಂಬಂಧಿಕರ ಮನೆಗೆ ತೆರಳಿದ ಮಹಿಳೆ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ನ ಚೈನ್ ತೆರೆದಿದ್ದು, ಅದರಲ್ಲಿ ಇಟ್ಟಿದ್ದ ಸಣ್ಣ ಪರ್ಸ್ ಕಾಣೆಯಾಗಿತ್ತು.
ಆಕೆಯ ಬಳಿಯಿದ್ದ 50 ಗ್ರಾಂ ಚಿನ್ನದ ಸರ, ಎಟಿಎಂ ಕಾರ್ಡ್, ಪತಿಯ ಬಿಎಸ್ಎಫ್ ಮಿಲಿಟರಿ ಕಾರ್ಡ್, ಬೆಳ್ಳಿಯ ಕಾಲುಂಗರ, ವಾಚ್, ಸೇರಿದಂತೆ ಸುಮಾರು 2.10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ. ಕೂಡಲೇ ಮಹಿಳೆಯರು ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


