ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿಯನ್ನು ಬದಲಾಯಿಸಲು ಸರ್ಕಾರ ಸಮ್ಮತಿಸಿದೆ ಎಂದು ತಿಳಿದುಬಂದಿದೆ.

ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್, ಐಎಎಸ್ ಅವರೊಂದಿಗೆ ನಡೆಸಿದ ಚರ್ಚೆಯ ಬಳಿಕ ಶನಿವಾರದ ಶಾಲಾ ಸಮಯವನ್ನು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12.30 ರವರೆಗೆ ನಿಗದಿಪಡಿಸಲು ಒಪ್ಪಿಗೆ ದೊರೆತಿದೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.

ಈ ಹಿಂದೆ ಶನಿವಾರದ ಶಾಲಾ ಸಮಯ ಬೆಳಿಗ್ಗೆ 7.45 ರಿಂದ 11.45 ರವರೆಗೆ ನಿಗದಿಯಾಗಿತ್ತು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಎದುರಿಸುತ್ತಿದ್ದರು. ವಿಶೇಷವಾಗಿ ಗ್ರಾಮೀಣ ಭಾಗದ ಶಿಕ್ಷಕರಿಗೆ ಬೆಳಿಗ್ಗೆ ಬೇಗನೆ ಶಾಲೆಗೆ ತಲುಪಲು ಸೂಕ್ತ ಬಸ್ ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಚಳಿಗಾಲ ಹಾಗೂ ಮಳೆಗಾಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದರು.

ಹೀಗಾಗಿ ಶಾಲಾ ಸಮಯವನ್ನು ಬದಲಾಯಿಸುವಂತೆ ಶಿಕ್ಷಕರ ಸಂಘಗಳು ಬಹುಕಾಲದಿಂದ ಒತ್ತಾಯಿಸುತ್ತಿದ್ದವು. ಇದೀಗ ಸರ್ಕಾರ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಯ ಬದಲಾವಣೆಗೆ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.