ದಾವಣಗೆರೆ : ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ ವೇಳೆ ಲೇಡಿ ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಡೆದಿದೆ.

ಜೂನ್ 21ರ ರಾತ್ರಿ ಸುಮಾರು 11.50ರ ವೇಳೆಗೆ ಈ ಘಟನೆ ನಡೆದಿದೆ. ಮಹಿಳೆ ತನ್ನ ಪತಿಯೊಂದಿಗೆ ಥಾರ್ ಕಾರಿನಲ್ಲಿ ಆಗಮಿಸಿದ್ದು, ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದಳು ಎನ್ನಲಾಗಿದೆ.

ಈ ವೇಳೆ ಡ್ರಿಂಕ್ & ಡ್ರೈವ್ ತಪಾಸಣೆ ನಡೆಸಲು ಲೇಡಿ ಪಿಎಸ್ಐ ವಾಹನವನ್ನು ತಡೆದು, ಮಹಿಳೆಯನ್ನು ಸಮಾಧಾನಪಡಿಸಿ “ನಿನ್ನ ಹೆಸರು ಏನು?” ಎಂದು ಕೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಮಹಿಳೆ “ನೀನು ಯಾರು? ನನ್ನನ್ನು ಕೇಳಲು?” ಎಂದು ಗದ್ದಲ ಮಾಡಿದ್ದಾಳೆ.

ತಪಾಸಣೆ ಮುಂದುವರಿಸಲು ಪ್ರಯತ್ನಿಸಿದ ವೇಳೆ, ಆಕೆ ಲೇಡಿ ಪಿಎಸ್ಐ ಅವರ ಹೊಟ್ಟೆ ಭಾಗಕ್ಕೆ ಒದ್ದಿದ್ದಾಳೆ. ನಂತರ ಮದ್ಯಪಾನ ತಪಾಸಣೆ ನಡೆಸದೇ ಬೇರೆ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಈ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.