ರೇಣುಕಾಚಾರ್ಯ & ಡಿಕೆಶಿ ಮಾತುಕತೆ ; ಕೈ ಪಾಲಾಗುತ್ತಾ ಹೊನ್ನಾಳಿ ಹೋರಿ
ಬೆಂಗಳೂರು : ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ.ಪಿ ರೇಣುಕಾಚಾರ್ಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರನ್ನು ಭೇಟಿಮಾಡಿ ಮಾತುಕತೆ ಮಡೆಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮಾಜಿ ಶಾಸಕ ರೇಣುಕಾಚಾರ್ಯ ಬಿಜೆಪಿ ಹೈಕಮಾಂಡ್ ಹಾಗೂ ಕೆಲ ರಾಜ್ಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹಾಗೆಯೇ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಸಧ್ಯ ರೇಣುಕಾಚಾರ್ಯ ಕಾಂಗ್ರೆಸ್ ಮುಖಂಡರ ಭೇಟಿ ಮಾಡಿದ್ದು ಆಪರೇಷನ್ ಕಾಂಗ್ರೆಸ್ ಸದ್ದು ಮತ್ತಷ್ಟು ಜೋರಾಗುವ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ಆಯನೂರು ಮಂಜುನಾಥ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅನೇಕ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಕಸರತ್ತು ಮುಂದುವರಿಸಿದೆ.
ಇನ್ನೂ ಕಟ್ಟಾ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್ ಯಡಿಯೂರಪ್ಪ ಮೇಲೆ ಪ್ರೀತಿ ಹಿಂದಿರುವ ಮಾಜಿ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ಭೇಟಿ ಹಿಂದೆ ಅನೇಕ ಚರ್ಚೆ ಏರ್ಪಟ್ಟಿದ್ದು, ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಇವರು ಕಾಂಗ್ರೆಸ್ ಸೇರುವ ಲೆಕ್ಕಾಚಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಾರಿ ದಾವಣಗೆರೆ ಲೋಕಸಭಾ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಶಾಸಕ ರೇಣುಕಾಚಾರ್ಯ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಇನ್ನೂ ಒಂದುವೇಳೆ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಲೆಕ್ಕಾಚಾರ ಹೊಂದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಡಿಸಿಎಂ ಭೇಟಿ ಬಳಿಕ ರೇಣುಕಾಚಾರ್ಯ ಮಾತನಾಡಿ, ” ಇವತ್ತು ವರಮಹಾಲಕ್ಷ್ಮಿ ಹಬ್ಬ, ಶುಭಾಶಯ ಕೋರಲು ಬಂದಿದ್ದೆ. ಸಿಎಂ,ಡಿಸಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಮಳೆ ಇಲ್ಲ.ಈ ತಾಲೂಕುಗಳನ್ನು ಬರ ಘೋಷಣೆ ಮಾಡಲು ಮನವಿ ಮಾಡಿದ್ದೇನೆ ಎಂದಿದ್ದಾರೆ.


