DCC ಬ್ಯಾಂಕ್ ನಲ್ಲಿ ಶಕ್ತಿ ಪ್ರದರ್ಶಿಸಿದ ಕತ್ತಿ ಸಾಹುಕಾರ್ ; ಬೆಂಬಲಿತರ ಸಂಖ್ಯೆ ಎಷ್ಟು..?
ಬೆಳಗಾವಿ : ನಿನ್ನೆಯಷ್ಟೇ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಹುಕ್ಕೇರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಸಂಸದ ರಮೇಶ್ ಕತ್ತಿ ಇಂದು ಮತ್ತೊಮ್ಮೆ ತಮ್ಮ ಬೆಂಬಲಿತ 52 ಪಿಕೆಪಿಎಸ್ ಮತದಾರರನ್ನು ( ಡೆಲಿಗೆಟ್) ಜೊತೆ ಆಗಮಿಸಿ ನಸಮಪತ್ರ ಸಲ್ಲಿಸಿದ್ದಾರೆ.
ಬುಧವಾರ ನಗರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ಆಗಮಿಸಿದ್ದ ಇವರು ತಮ್ಮ ಜೊತೆಗಿರುವ 52 ಬೆಂಬಲಿತ ಮತದಾರರ ಜೊತೆ ಸೇರಿ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಿನ್ನೆಯಷ್ಟೇ ಹುಕ್ಕೇರಿ ಕ್ಷೇತ್ರದ 42 ಮತದಾರರ ಬೆಂಬಲದೊಂದಿಗೆ ರಾಜೇಂದ್ರ ಪಾಟೀಲ ಎಂಬುವವರನ್ನು ಅಭ್ಯರ್ಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ನನ್ನ ಬೆಂಬಲವಾಗಿರುವ 52 ಸದಸ್ಯರ ಜೊತೆ ಸೇರಿ ಮತ್ತೊಂದು ಸುತ್ತಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಡಿಸಿಸಿ ಕೇಂದ್ರ ಕಚೇರಿ ನೋಡಬೇಕು ಎಂಬ ಆಸೆ ಹೊಂದಿದ್ದ ಮತದಾರರನ್ನೂ ನನ್ನ ಜೊತೆ ಕರೆದುಕೊಂಡು ಬಂದಿರುವೆ ಎಂದು ತಿಳಿಸಿದರು.
ಜಿಲ್ಲೆಯ ಯಾವುದೇ ಕ್ಷೇತ್ರದ ಮುಂದಾಳತ್ವವನ್ನು ನಾನು ವಹಿಸುವುದಿಲ್ಲ. ಆಯಾ ತಾಲೂಕಿನ ಮುಖಂಡರು ನಿರ್ಧರಿಸಿ ತಗೆದುಕೊಳ್ಳುವ ನಿರ್ಧಾರದ ಪರವಾಗಿ ನಾನು ನಿಲ್ಲುತ್ತೇನೆ. ಸಮಾನ ಮನಸ್ಕರು ಒಂದುಗೂಡಿ ಕೈ ಜೋಡಿಸಿದ್ದೇ ಆದರೆ ಬ್ಯಾಂಕ್ ಹಿತದೃಷ್ಟಿಯಿಂದ ಮುನ್ನಡೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.


