
ಶೆಟ್ಟರ್ ಗೆ ಸಂಕಷ್ಟ ; ನಿಮಗೆ ಮಹಾದೇವಪ್ಪ ಬೇಕಾದರೆ ನಮ್ಮ ಬಳಿ ಬರಬೇಡಿ ಎಂದ ಚಿಕ್ಕರೇವಣ್ಣ ಅಭಿಮಾನಿಗಳು

ಬೆಳಗಾವಿ : ಬಿಜೆಪಿ ಟಿಕೆಟ್ ಪಡೆದು ಗೆಲುವಿನ ಉತ್ಸಾಹದಲ್ಲಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಮನೆಯಾಗಿದ್ದ ರಾಮದುರ್ಗ ಬಿಜೆಪಿಯಲ್ಲಿ ಮತ್ತೆ ಬಂಡಾಯ ಎದ್ದಿದೆ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಬೇಕಾದರೆ ನಮ್ಮ ಬಳಿ ನೀವು ಬರುವುದು ಬೇಡ ಎಂದು ಚಿಕ್ಕರೇವಣ್ಣ ಅಭಿಮಾನಿಗಳು ಶೆಟ್ಟರ್ ಗೆ ವಿನಂತಿ ಮಾಡಿದ್ದಾರೆ.
ಶುಕ್ರವಾರ ರಾಮದುರ್ಗ ಕ್ಕೆ ಭೇಟಿ ನೀಡಿದ್ದ ಜಗದೀಶ್ ಶೆಟ್ಟರ್ ಅವರು ಅಸಮಾಧಾನ ಹೊಂದಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸಂತೈಸುವ ಕೆಲಸ ಮಾಡಿದ್ದರು. ಇದಾದ ನಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಚಿಕ್ಕರೇಚಣ್ಣ ಅವರ ಬೆಂಬಲಿಗರ ಸಭೆ ನಡೆಸಿದ್ದು, ಅಲ್ಲಿ ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದವರನ್ನೇ ಭೇಟಿ ಮಾಡಿದ್ದೀರಿ. ಇದರ ಅವಶ್ಯಕತೆ ಏನಿತ್ತು. ಚಿಕ್ಕರೇವಣ್ಣ ಅವರು ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳುತ್ತೀರಿ. ಈ ಕ್ಷಣದಲ್ಲೇ ಅವರನ್ನು ಕರೆಸಿಕೊಳ್ಳುವ ಶಕ್ತಿ ನಮಗಿದೆ. ಒಂದುವೇಳೆ ಯಾದವಾಡ ನಿನಗೆ ಬೇಕಾದರೆ ದಯವಿಟ್ಟು ನಮ್ಮ ಬೆಂಬಲ ನಿಮಗೆ ಇಲ್ಲ ಎಂದು ಚಿಕ್ಕರೇವಣ್ಣ ಅಭಿಮಾನಿಗಳು ಶೆಟ್ಟರ್ ಗೆ ಹೇಳಿರುವ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಒಳಗಿನ ಬಂಡಾಯದ ಬಿಸಿ ಇನ್ನೂ ತನ್ನಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಜೊತೆಗೆ ಅಸಮಾಧಾನ ಹೊಂದಿರುವ ನಾಯಕರ ನಡುವಿನ ಸಮನ್ವಯ ಕೊರತೆ ಎದ್ದು ಕಾಣುತ್ತಿದ್ದು ಇದರಿಂದ ಬಿಜೆಪಿಗೆ ಸಂಕಷ್ಟ ಎದುರಾಗಿರುವುದಂತು ಸತ್ಯ.