
ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್ಐ ಅಮಾನತು

ತುಮಕೂರು : ಕ್ಯಾಬ್ ಚಾಲಕರೊಬ್ಬರಿಂದ ಫೋನ್ ಪೇ ಮೂಲಕ ಲಂಚ ಪಡೆದ ಆರೋಪದ ಮೇಲೆ ಗುಬ್ಬಿ ಠಾಣೆ ಪಿಎಸ್ಐ ಜ್ಞಾನಮೂರ್ತಿ ಎಂಬುವವರನ್ನು ಅಮಾನತುಗೊಳಿಸಿ ಎಸ್ ಪಿ ಆದೇಶಿಸಿದ್ದಾರೆ.
ಜಿಲ್ಲೆಯ ಗುಬ್ಬಿ ತಾಲೂಕಿನ ಎಂ.ಎಚ್ ಪಟ್ಟಣ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದ, ಬಳಿಕ ಸ್ಥಳಕ್ಕೆ ತೆರಳಿದ್ದ ಗುಬ್ಬಿ ಎಸ್ಐ ಜ್ಞಾನಮೂರ್ತಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮೃತದೇಹ ಸಾಗಿಸಲು ಮುಂದಾದ ಪಿಎಸ್ಐ ಬೆಂಗಳೂರಿನಿಂದ ತರೀಕೆರೆಗೆ ಹೋಗುತ್ತಿದ್ದ ತರಕಾರಿ ಸಾಗಿಸುತಗತಿದ್ದ ಮ್ಯಾಕ್ಸಿ ಕ್ಯಾಬ್ ಚಾಲಕ ಶಕೀಲ್ ನನ್ನು ತಡೆದು ಶವ ಸಾಗಿಸುವಂತೆ ಹೇಳಿದ್ದರು. ಇದಕ್ಕೆ ಒಪ್ಪದ ಶಕೀಲ್ ಗಾಯಾಳು ಆಗಿದ್ದರೆ ಆಸ್ಪತ್ರೆಗೆ ಸಾಗಿಸುತ್ತಿದ್ದೆ ಆದರೆ ಶವ ಸಾಗಿಸಲು ನಿರಾಕರಿಸಿದ್ದಾನೆ. ಕೂಡಲೇ ಪಿಎಸ್ಐ ಮ್ಯಾಕ್ಸಿ ಕ್ಯಾಬ್ ವಶಕ್ಕೆ ಪಡೆದು 100 ರೂ ರಶೀದಿ ಪಡೆದು 7,000 ರೂ ತಮ್ಮ ವಾಹನ ಚಾಲಕನ ಖಾತೆಗೆ ಜಮಾ ಮಾಡುವಂತೆ ಹೇಳಿದ್ದರು.
ಭಯದಿಂದ ಮ್ಯಾಕ್ಸ್ ಕ್ಯಾಬ್ ಚಾಲಕ ಪಿಎಸ್ಐ ವಾಹನ ಚಾಲಕನ ಅಕೌಂಟ್ ಗೆ ಫೋನ್ ಪೇ ಮೂಲಕ ಹಣ ಸಂದಾಯ ಮಾಡಿದ್ದರು. ಈ ಸಂದರ್ಭದಲ್ಲಿ ಕ್ಯಾಬ್ ಚಾಲಕರ ಸಂಘಟನೆ ಸದಸ್ಯರು ಪಿಎಸ್ಐ ಅಮಾನತು ಮಾಡುವಂತೆ ಎಸ್ ಪಿ ರಾಹುಲ್ ಕುಮಾರ ಶಹಾಪುರ ಅವರನ್ನು ಆಗ್ರಹಿಸಿದ್ದರು.
ಪಿಎಸ್ಐ ಮ್ಯಾಕ್ಸಿ ಕ್ಯಾಬ್ ಚಾಲಕನಿಂದ ಹಣ ಪಡೆದುಕೊಂಡ ಆರೋಪದ ಮೇಲೆ ಅಮಾನತ್ತು ಆಗಿದ್ದು, ಎಸ್ ಪಿ ಈ ಕುರಿತು ಆದೇಶ ಹೊರಡಿಸಿದ್ದಾರೆ.