ಖಾನಾಪುರ: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಖಾನಾಪುರ ಪಟ್ಟಣದ ಯುವಕನೊಬ್ಬ ನೇಪಾಳದಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ದುರ್ಘಟನೆ ನಡೆದಿದೆ. ಪಟ್ಟಣದ ಮುಸ್ಲಿಂ ನಿಂಗಾಪುರ ಗಲ್ಲಿಯ ನಿವಾಸಿ ಸಾಹಿಲ್ ರಿಯಾಜ್ ಅಹ್ಮದ್ ಮೊಮೀನ್ (25) ಮೃತ ಯುವಕನಾಗಿದ್ದಾರೆ.

ಲಭ್ಯ ಮಾಹಿತಿಯಂತೆ, ಸಾಹಿಲ್ ಮೊಮೀನ್ ಅವರು ಕೆಲ ವರ್ಷಗಳ ಕಾಲ ದುಬೈ ಹಾಗೂ ಬಳಿಕ ಥೈಲ್ಯಾಂಡ್‌ನಲ್ಲಿ ಉದ್ಯೋಗ ಮಾಡಿದ್ದು, ಸುಮಾರು 25 ದಿನಗಳ ಹಿಂದೆ ನೇಪಾಳದ ಝಾಪಾ ಜಿಲ್ಲೆಯ ದಮಕದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿಯೇ ಸದ್ದಾಂ ಹುಸೇನ್ ಎಂಬ ವ್ಯಕ್ತಿಯೊಂದಿಗೆ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.

ಘಟನೆಯ ಹಿಂದಿನ ದಿನ ಸಾಹಿಲ್ ಅವರು ಬೆಳಗಾವಿಯಲ್ಲಿದ್ದ ತಮ್ಮ ಸ್ನೇಹಿತನೊಬ್ಬನನ್ನು ಅದೇ ಹೋಟೆಲ್‌ನಲ್ಲಿ ಉದ್ಯೋಗಕ್ಕಾಗಿ ಕರೆಸಿಕೊಂಡಿದ್ದರು. ರಾತ್ರಿ ಮೂವರೂ ಒಂದೇ ಕೊಠಡಿಯಲ್ಲಿ ಮಲಗಿದ್ದ ವೇಳೆ ಸಾಹಿಲ್ ಹಾಗೂ ಸದ್ದಾಂ ನಡುವೆ ವಾಗ್ವಾದ ನಡೆದಿದ್ದು, ಸ್ನೇಹಿತ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾನೆ ಎನ್ನಲಾಗಿದೆ.

ಆದರೆ ಮುಂಜಾನೆ ನಿದ್ರೆಯಲ್ಲಿದ್ದ ಸಾಹಿಲ್ ಮೇಲೆ ಸದ್ದಾಂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಾಹಿಲ್ ಅವರ ಕಿರುಚಾಟ ಕೇಳಿ ಸ್ನೇಹಿತ ಆರೋಪಿಯನ್ನು ಹಿಡಿಯಲು ಯತ್ನಿಸಿದರೂ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಸಾಹಿಲ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಖಾನಾಪುರದಲ್ಲಿರುವ ಸಾಹಿಲ್ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದವರು ಬೆಳಗಾವಿ ಜಿಲ್ಲಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ನೇಪಾಳ ಪೊಲೀಸರ ಸಹಯೋಗದೊಂದಿಗೆ ಮೃತದೇಹವನ್ನು ಭಾರತಕ್ಕೆ ತರಿಸುವುದು ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ನೇಪಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ.