ಸ್ವಯಂ ನಿವೃತ್ತಿಯಿಂದ ಹಿಂದೆ ಸರಿದ ASP ; ಏನು ಹೇಳಿದ್ರು ನಾರಾಯಣ ಬರಮನಿ
ಬೆಳಗಾವಿ : ಬೆಳಗಾವಿ : ಕಾಂಗ್ರೆಸ್ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಅವಮಾನದಿಂದ ನೊಂದು ತಮ್ಮ ಸ್ಥಾನ ತೆರವುಗೊಳಿಸುವಂತೆ ಸರಕಾರಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬರೆದ ಪತ್ರ ವೈರಲ್ ಬೆನ್ನಲ್ಲೇ ಖುದ್ದು ಸಿಎಂ ಸೇರಿದಂತೆ ಅನೇಕರು ಮಾತುಕತೆಗೆ ಮುಂದಾಗಿದ್ದಾರೆ.
ಧಾರವಾಡ ASP ನಾರಾಯಣ ಬರಮನಿ ಅವರು ಸೇವಾ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಕರೆ ಮಾಡಿ ನಾರಾಯಣ ಬರಮನಿ ಅವರ ಜೊತೆ ಮಾತನಾಡಿರುವ ಇವರು, ಮನವೊಲಿಸಲು ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ ನನ್ನ ಭಾವನೆಗಳನ್ನು ನನ್ನ ಹಿರಿಯ ಅಧಿಕಾರಿಗಳಿಗೆ ತಿಳಿಸಿರುವೆ. ಹಿರಿಯ ಅಧಿಕಾರಿಗಳು ಕೂಡ ನನ್ನೊಂದಿಗೆ ಮಾತನಾಡಿದ್ದಾರೆ. ನಾನು ಶಿಸ್ತಿನ ಇಲಾಖೆಯಲ್ಲಿದ್ದೇನೆ. ಸಿಎಂ ಸಾಹೇಬ್ರು ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ನಾನು ಯಾವಾಗಲೂ ಮಾಧ್ಯಮಕ್ಕೆ ಮಾತನಾಡಿಲ್ಲ. ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದರು.
ಸಿಎಂ ಹೇಳಿದ್ದೇನು…? : ಭರಮನಿ ಅವರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸಿದ ಸಿಎಂ, ಸ್ವಯಂನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಮನವರಿಕೆ ಮಾಡಿದ್ದಾರೆ.

