ಬೆಳಗಾವಿ : ಸಚಿವ ಸತೀಶ್ ಜಾರಕಿಹೊಳಿ ಬಾಮೈದ ವೈ. ಮಂಜುನಾಥ ಮನೆ ಮೇಲೆ ಇಡಿ ಅಧಿಕಾರಿಗಳು ನಿರಂತರ 25 ಗಂಟೆ ದಾಳಿ ನಡೆಸಿದ್ದು ಈ ವೇಳೆ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಇಡಿ ದಾಳೆ ವೇಳೆ ಮಂಜುನಾಥ ಮನೆಯಲ್ಲಿ ಲಂಚ ಪಡೆದ ಹಣವನ್ನು ಹಂಚಿಕೆ ಮಾಡಿಕೊಂಡಿದ್ದನ್ನು ದಾಖಲಿಸಿಕೊಂಡ ಪುಸ್ತಕ ಪತ್ತೆಯಾಗಿದೆ. ಸಧ್ಯ ಈ ದಲ್ಲಾಳಿ ಡೈರಿಯನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಲಂಚದ ಪಾಲು ಪಡೆದ ಪ್ರಭಾವಿಗಳ ಹೆಸರು ಉಲ್ಲೇಖವಿದೆ ಎನ್ನಲಾಗುತ್ತಿದೆ.
ಇಡಿ ದಾಳಿಯಲ್ಲಿ ಸಿಕ್ಕಿದ್ದೇನು…?
5.5 ಕೋಟಿ ನಗದು, 7.8 ಕೋಟಿ ಮೌಲ್ಯದ ಚಿನ್ನಾಭರಣ, ಹಾಗೂ 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಇದರ ಜೊತೆಗೆ, ಕ್ಯಾಶ್ ಬುಕ್, ಆಸ್ತಿ ಪತ್ರಗಳು ಸೇರಿದಂತೆ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನೂ ಇಡಿ ವಶಕ್ಕೆ ಪಡೆದಿದೆ.
ಕಂಡುಬಂದ ಪ್ರಮುಖ ಅಂಶಗಳು….?
ಅಬಕಾರಿ ಇಲಾಖೆಯಲ್ಲಿ ಲಂಚ ಸಂಗ್ರಹಿಸಲು ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆ. ಮದ್ಯದಂಗಡಿಗಳಿಂದ ಪ್ರತಿ ತಿಂಗಳು ನಿಗದಿತ ಪ್ರಮಾಣದ ಲಂಚ ವಸೂಲಿ ಮಾಡಲಾಗುತ್ತಿದೆ. ಪರವಾನಗಿ ನವೀಕರಣ, ವರ್ಗಾವಣೆ ಮತ್ತು ಹೊಸ ಪರವಾನಗಿ ನೀಡುವಾಗಲೂ ಲಂಚ ಪಡೆಯಲಾಗುತ್ತಿದೆ. ಸಂಗ್ರಹವಾದ ಹಣವನ್ನು ಮಧ್ಯವರ್ತಿಗಳ ಮೂಲಕ ಹಂಚಿಕೆ ಮಾಡಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಅನಧಿಕೃತ ಲೆಕ್ಕಪತ್ರವೂ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣವನ್ನು ವೈಯಕ್ತಿಕ ಖರ್ಚು, ಆಸ್ತಿ ಖರೀದಿ ಮತ್ತು ವ್ಯವಹಾರ ಹೂಡಿಕೆಗಳಿಗೆ ಬಳಸಲಾಗಿದೆ. ಹಲವಾರು ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಮದ್ಯ ಮಾರಾಟ ಪರವಾನಗಿಗಳನ್ನು ಪಡೆದು ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದೆ.
ಈ ವ್ಯವಹಾರಗಳಿಂದ ಬಂದ ಆದಾಯವನ್ನು ಕಾನೂನುಬದ್ಧ ಆದಾಯದಂತೆ ತೋರಿಸಿ ಅಕ್ರಮ ಹಣವನ್ನು ಆರ್ಥಿಕ ವ್ಯವಸ್ಥೆಯಲ್ಲಿ ಬೆರೆಸಲಾಗಿದೆ.
ಮೂರು ಅಧಿಕಾರಿಗಳ ಒಳಗೊಂಡ ದಾಳಿ :
ಶೋಧ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳಾದ ಜಗದೀಶ್ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ.ಡಿ. ಮಂಜುನಾಥ್ ಸೇರಿದಂತೆ ಅವರ ಕುಟುಂಬ ಸದಸ್ಯರು ಹಾಗೂ ಸಹಚರರು ಒಳಗೊಂಡಂತೆ ಇಡಿ ದಾಳಿ ನಡೆದಿದೆ.
ಸಾಹುಕಾರ್ ಅಳಿಯನ ಲಂಚದ ಅರಮನೆ ; ಹಣ ಹಂಚಿಕೆ ಪುಸ್ತಕ ಇಡಿ ವಶಕ್ಕೆ



