
ರಾಯಣ್ಣನ ಹುಟ್ಟೂರಿಗೂ ವಕ್ಕರಿಸಿದ ವಕ್ಫ್ ವಿವಾದ

ಬೆಳಗಾವಿ : ಸಧ್ಯ ಎಲ್ಲೆಡೆಯೂ ವಕ್ಫ್ ಬೋರ್ಡ್ ನ ಅವಾಂತರ ಮಾತುಗಳೇ ಜೋರಾಗಿವೆ, ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರಿಗೂ ವಕ್ಫ್ ವಿವಾದ ಕಾಲಿಟ್ಟಿದೆ. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಸ್ಮಶಾನ ಭೂಮಿ ಮೇಲೆ ವಕ್ಫ್ ವಕ್ರ ದೃಷ್ಟಿ ನೆಟ್ಟಿದೆ.
ಹೌದು ಸಂಗೊಳ್ಳಿ ಗ್ರಾಮದ ಗ್ರಾಪಂ ಆಸ್ತಿಯನ್ನು ಸಾರ್ವಜನಿಕವಾಗಿ ಸ್ಮಶಾನಕ್ಕೆ ಹಸ್ತಾಂತರಿಸಿದ ಮಸಣಮಠ ಎಂಬ ಹೆಸರಿನ 128 ಸರ್ವೇ ನಂಬರ್ 8 ಏಕರೆ 27 ಗುಂಟೆ ಆಸ್ತಿಯ ಹೆಸರಿನಲ್ಲಿದ್ದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹಕ್ಕು ದಾಖಲಾತಿಯ ಕಾಲಂನಲ್ಲಿ ಸೇರಿಸಲಾಗಿದೆ. ಎರಡು ದಿನಗಳ ಹಿಂದೆ ಗ್ರಾಮಸ್ಥರು ಪಹಣಿ ಪತ್ರ ತಗೆದ ಸಂದರ್ಭದಲ್ಲಿ ವಕ್ಪ್ ಅವಾಂತರ ಬೆಳಕಿಗೆ ಬಂದಿದೆ.
ಈ ಕುರಿತು ಬೈಲಹೊಂಗಲ ತಹಶೀಲ್ದಾರ ಹಣಮಂತ ಶಿರಹಟ್ಟಿ ಅವರನ್ನು ಸಂಪರ್ಕಿಸಲಾಗಿ ಗೆಜೆಟ್ ನಲ್ಲಿ ಈ ರೀತಿ ಆಗಿರಬಹುದು, ಇಲ್ಲಿಯವರೆಗೆ ನಮ್ಮ ಕಚೇರಿಯಿಂದ ಯಾವುದೇ ನೊಟೀಸ್ ನೀಡಿ ವಕ್ಪ್ ಆಸ್ತಿ ಎಂದು ದಾಖಲಾತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಸ್ಥರು ಸ್ಮಶಾನ ಭೂಮಿ ಆಸ್ತಿಯಲ್ಲಿ ವಕ್ಫ್ ಹೆಸರು ಸೇರಿಸಿದ್ದನ್ನು ಕೂಡಲೇ ತಗೆದುಹಾಕುವಂತೆ ಆಗ್ರಹಿಸಿದ್ದಾರೆ.
ಸಂಗೊಳ್ಳಿ ಗ್ರಾಮದ ಸರ್ಕಾರಿ ಸ್ಮಶಾನ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದನ್ನು ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ವಕ್ಫ್ ವಿರುದ್ಧ ಆಕ್ರೋಶ ಹೊರಹಾಕಿದೆ. ಸೋಮವಾರ ನಗರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ವಕ್ಪ್ ಬೋರ್ಡ್ ನಿಂದ ದೌರ್ಜನ್ಯ ನಡೆಯುತ್ತಿದ್ದು ಸರ್ಕಾರ ಕೂಡಲೇ ಈ ಅವಾಂತರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.