ಅನುದಾನ ಕೊಟ್ಟಿದ್ದು ಬಿಜೆಪಿ ; ಹೆಸರು ಪಡೆಯುತ್ತಿರುವುದು ಸವದಿ – ಮಾಜಿ ಶಾಸಕ ಕುಮಠಳ್ಳಿ ವ್ಯಂಗ್ಯ
ಬೆಳಗಾವಿ : ಅಥಣಿಯಲ್ಲಿ ಪಶು ವೈದ್ಯಕೀಯ ಸ್ಥಾಪನೆ ಮಾಡಲು ಶ್ರಮಿಸಿದ್ದು ನಾನು. ಅಲ್ಲದೆ, ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗೂ ಶ್ರಮಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲು ಬರುತ್ತಿರುವ ಯೋಜನೆ ಬಿಜೆಪಿ ಸರಕಾರದಲ್ಲಿ ಆದ ಯೋಜನೆ ಎಂದು ಅಥಣಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಇನ್ನೂ ಕೆಲ ಕಾಮಗಾರಿಗಳು ಟೆಂಡರ್ ಹಂತದಲ್ಲಿ ಇವೆ. ಅದನ್ನು ಶೀಘ್ರದಲ್ಲೇ ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕು. ನಾನು ಶಾಸಕನಾಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಪರ ಕೆಲಸ ಮಾಡಿದ್ದೇನೆ ಎಂದರು.
ಅಭಿವೃದ್ಧಿ ಮಾಡಿದರೆ ಮಾತ್ರ ಚುನಾವಣೆ ಗೆಲ್ಲುವು ಸಾಧಿಸುತ್ತೇವೆ ಎನ್ನುವುದು ಸುಳ್ಳು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಅಲ್ಲದೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ, ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬಿಜೆಪಿಯ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದವರು. ಕಾಂಗ್ರೆಸ್ ಗ್ಯಾರಂಟಿಗೆ ಮನಸೋತು ಕಾಂಗ್ರೆಸ್ ಗೆಲ್ಲಿಸಿದ್ದಾರೆ ಎಂದರು.
ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜೀರಲಿ ಮಾತನಾಡಿ, ಅಥಣಿಯ ಕೊಕಟನೂರನಲ್ಲಿ ಪಶುವೈದ್ಯಕೀಯ ಕಾಲೇಜನ್ನು ಉದ್ಘಾಟನೆಗೆ ಆಗಮಿಸುತ್ತಿರುವುದು ಸಿಎಂ ಸಿದ್ದರಾಮಯ್ಯ ಸಂತೋಷ. ಆದರೆ ಕಳೆದ 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದರು. ಈ ಭಾಗದಲ್ಲಿ ಪಶುಗಳು ಹೆಚ್ಚಿರುವ ಉದ್ದೇಶದಿಂದ ಬಾವುರಾವ ದೇಶಪಾಂಡೆ ಅವರ ಸವಿ ನೆನಪಿಗಾಗಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಕೂಗು ಇತ್ತು.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಇದಕ್ಕೆ ಅನುದಾನ ನೀಡಲಿಲ್ಲ. ಆದರೆ ಮತ್ತೇ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದ ಬಳಿಕ ಈ ವೈದ್ಯಕೀಯ ಕಾಲೇಜಿಗೆ ಅನುದಾನ ನೀಡಿ ಅದಕ್ಕೆ ಬೇಕಾಗುವ ವ್ಯವಸ್ಥೆ ಮಾಡಿ ಒಂದೂವರೆ ಎಕರೆಯಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಶ್ರೇಯ ಬಿಜೆಪಿಗೆ ಸಲ್ಲುತ್ತದೆ ಎಂದರು.
ಇತ್ತೀಚೆಗೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಮಗಾರಿ ಉದ್ಘಾಟನೆ ಮಾಡುವ ವೇಳೆ ಅಧಿಕಾರಿಗಳು ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಅದು ಮುಂದುವರೆಯಬಾರದು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


