ಲಕ್ಷ್ಮೀ ಹೆಬ್ಬಾಳ್ಕರ್ ಸ್ಪೋಟಕ ಹೇಳಿಕೆ ; 50 ಕಾಂಗ್ರೆಸ್ ಮುಖಂಡರ ಮೇಲೆ ತನಿಖಾ ದಾಳಿ ಸಾಧ್ಯತೆ
ಬೆಳಗಾವಿ : ವಿಧಾನಸಭೆಯ ಚುನಾವಣೆಯ ಕೇವಲ 10 ದಿನ ಇರುವಾಗಲೇ ಬಿಜೆಪಿಯವರು ನನ್ನ ಸೇರಿದಂತೆ ಸುಮಾರು 50 ಕಾಂಗ್ರೆಸ್ ಅಭ್ಯರ್ಥಿಗಳು, ಸಂಬಂಧಿಕರ ಮನೆಯ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.
ಭಾನುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯವರು ಹತಾಶೆಯಾಗಿ ಕೆಲವು ವಾಮ ಮಾರ್ಗವನ್ನು ಹಿಡಿಯುವ ಸುದ್ದಿಗಳು ತಿಳಿದಿವೆ. ಬೆಳಗಾವಿಯಲ್ಲಿ ನನ್ನ ಸೇರಿ ಮೂವರು ಸೇರಿದಂತೆ ಸುಮಾರು 50 ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ, ಐಟಿ ದಾಳಿ ಮಾಡುವ ಸುಳಿವು ಬಂದಿವೆ.
ಎಲ್ಲ ಕಡೆಗಳಲ್ಲಿ ನಮ್ಮ ಮಾಹಿತಿದಾರರು, ಕಾಂಗ್ರೆಸ್ ಗೆ ಒಳ್ಳೆಯದನ್ನು ಬಯಸುವವರು ಇರುತ್ತಾರೆ. ಅವರಿಂದ ತಿಳಿದು ಬಂದಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಕೇವಲ 10 ದಿನ ಮಾತ್ರ ಇದೆ. ಇಂಥ ಸಮಯ ಕಡಿಮೆ ಇದ್ದ ಸಂದರ್ಭದಲ್ಲಿ ಕಾರ್ಯಕರ್ತರು, ಜನರು ಗೊಂದಲಕ್ಕೆ ಇಡಾಗುವ ಪರಿಸ್ಥಿತಿ ತರುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಚುನಾವಣೆಯ ಬಂದಾಗ ವಿರೋಧ ಪಕ್ಷದವರನ್ನು, ಮತದಾರರನ್ನು ಬೇರೆ ಕಡೆ ಗಮನ ಹರಿಸುವುದು ಹವ್ಯಾಸವಾಗಿದೆ. ಸಮಯ ಬಹಳ ಮುಖ್ಯವಾಗಿದೆ. ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಇಂಥ ಮಾರ್ಗವನ್ನು ಬಿಜೆಪಿ ಕೈ ಬಿಡಬೇಕು ಎಂದು ತಿಳಿಸಿದರು.
ನಾನು ಒಬ್ಬ ರಾಜ್ಯದ ಕಾಂಗ್ರೆಸ್ ವಕ್ತಾರೆ. ಸುಮಾರು 50 ಜನರಲ್ಲಿ ನನ್ನ ಮೇಲೂ ದಾಳಿ ಮಾಡುವ ಮಾಹಿತಿ ಇದೆ. ನನ್ನ ಸೋಲಿಸುವುದು, ಗೆಲ್ಲಿಸುವುದು ಗ್ರಾಮೀಣ ಮತಕ್ಷೇತ್ರದ ಜನ. ಕಾರ್ಯಕರ್ತರು ಗೊಂದಲಕ್ಕೆ ಇಡಾಗುತ್ತಾರೆ. ಅಷ್ಟೆ ನನ್ನ ಕ್ಷೇತ್ರದ ಮೇಲೆ ಯಾವುದೇ ಮೇಲೆ ಪರಿಣಾಮ ಬಿರುವುದಿಲ್ಲ ಎಂದರು.
ಕರ್ನಾಟಕದಲ್ಲಿ ಈ ಬಾರಿ ಎಲ್ಲ ಕಡೆ ಕಾಂಗ್ರೆಸ್ ಪರವಾದ ವಾತಾವರಣ, ಅಲೆ ಜನಸಾಮಾನ್ಯರಿಂದ ಕೇಳಿ ಬರುತ್ತಿದೆ. ರಾಜ್ಯದ ಮತದಾರರು ಕಾಂಗ್ರೆಸ್ ಸರಕಾರ ರಚನೆ ಮಾಡುವ ಮನಸ್ಸು ಮಾಡಿದ್ದಾರೆ ಎಂದು ಎನ್ನಿಸುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿಯೂ ಉತ್ತಮವಾದ ವಾತಾವರಣ ಇದೆ. ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವಕರಿಗೆ ಪ್ರೋತ್ಸಾಹ ಧನ, 10 ಕೆ.ಜಿ.ಅಕ್ಕಿ ನೀಡಿರುವ ಗ್ಯಾರಂಟಿಯಿಂದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆಯಿಂದ ಜನ ಭರವಸೆ ಮಾಡಿದ್ದಾರೆ.
ಕಾಂಗ್ರೆಸ್‌ನ ಪ್ರಣಾಳಿಕೆ ಜನಪ್ರೀಯ ಯೋಜನೆಯಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಪ್ರತಿಯೊಂದು ರಾಜ್ಯದಲ್ಲಿ ಚುನಾವಣೆಯ ವೇಳೆ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುವುದು ಬಿಜೆಪಿಯ ಜಾಯಮಾನವಾಗಿದೆ. ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಜನರು ಮಾಡಬೇಕು. ಅದನ್ನು ಬಿಟ್ಟು ವಾಮ ಮಾರ್ಗ ಹಿಡಿಯುವುದು ಸರಿಯಲ್ಲ ಎಂದರು.


