
ನನ್ನಿಂದ 50 ಸಾವಿರ ಸಾಲ ಪಡೆದಿದ್ದ ಹೆಬ್ಬಾಳ್ಕರ್ 500 ಕೋಟಿ ಸಂಪಾದಿಸಿದ್ದು ಹೇಗೆ? ಸಂಜಯ್ ಪಾಟೀಲ್ ಆರೋಪ

ಬೆಳಗಾವಿ : 20 ವರ್ಷದ ಹಿಂದೆ ನನ್ನ ಬಳಿಯಿಂದ 50 ಸಾವಿರ ರೂ ಸಾಲ ತಗೆದುಕೊಂಡು ಹೋಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಈವರೆಗೂ ವಾಪಸ್ ನೀಡಿಲ್ಲ. ಈಗ ಕೋಟ್ಯಾಂತರ ರೂ ಹಣ ಮಾಡಿದ್ದು ಹೇಗೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಪ್ರಶ್ನಿಸಿದ್ದಾರೆ.
ಸಂಜಯ್ ಪಾಟೀಲ್ ರಾಜಹಂಸಗಡ ಕೋಟೆ ಬಳಿಯ ಮಣ್ಣು ಮಾರಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಕೊಟ್ಟರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.
20 ವರ್ಷಗಳ ಹಿಂದೆ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರೂ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅಂದು ಅವರು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದಿದ್ದರು. ಆಗ 50 ಸಾವಿರ ರೂ. ನನಗೆ ಸಹಾಯ ಮಾಡಿ ಎಂದು ಕೇಳಿ ಹೋಗಿದ್ದರು. ಆ ಸಮಯ ನನ್ನಿಂದ 50 ಸಾವಿರ ರೂ. ತೆಗೆದುಕೊಂಡು ಹೋದವರು ವಾಪಾಸ್ ಬರಲೇ ಇಲ್ಲ ಎಂದು ಆರೋಪಿಸಿದರು.
ಅಂದು ನನ್ನ ಕಡೆಯಿಂದ 50 ಸಾವಿರ ರೂ. ಸಾಲ ತೆಗೆದುಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ? ಅವತ್ತೇ ಸಂಜಯ್ ಪಾಟೀಲ್ ನಿಮಗೆ 50 ಸಾವಿರ ರೂ. ಸಾಲ ಕೊಟ್ಟಿದ್ದಾನೆ. ಅವನಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಮಣ್ಣು ಮಾರುವಂತಹ ಬಡತನ ಬಂದಿಲ್ಲ. ಸಂಜಯ್ ಪಾಟೀಲ್‌ಗೆ ಕೊಂಡು ತೆಗೆದುಕೊಳ್ಳೋ, ಎರಡು ನಂಬರ್ ಬ್ಯುಸಿನೆಸ್ ಮಾಡುವಂತಹ ಆಶೀರ್ವಾದ ದೇವರು ನನಗೆ ಮಾಡಿಲ್ಲ. ನಾನು ಲಕ್ಷ್ಮಿ ಪುತ್ರ ಎಂಬುದು ನನಗೆ ಗೊತ್ತಿದೆ. ದುಡ್ಡಿನ ಸಲುವಾಗಿ ಸಗಣಿ ತಿನ್ನುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿರುಗೇಟು ನೀಡಿದರು.