Select Page

Advertisement

ವಿವಿ ಕಾಮಗಾರಿ ಕರ್ಮಕಾಂಡ ಸಚಿವರೆದುರೇ ಬಯಲು

ವಿವಿ ಕಾಮಗಾರಿ ಕರ್ಮಕಾಂಡ ಸಚಿವರೆದುರೇ ಬಯಲು

ಬೆಳಗಾವಿ: ಆರಂಭದಿಂದಲೂ ತೀವ್ರ ವಿವಾದಕ್ಕೊಳಗಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಿರೇಬಾಗೇವಾಡಿ ಬಳಿಯ ನೂತನ ಕ್ಯಾಂಪಸ್ ಕಾಮಗಾರಿಯ ಕರ್ಮಕಾಂಡ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಎದುರೇ ಬಟಾ ಬಯಲಾಯಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಸಚಿವ ಸುಧಾಕರ ಅವರು ವಿಶ್ವವಿದ್ಯಾಲಯದ ಕಾಮಗಾರಿ ಪರಿಶೀಲನೆಗೆಂದು ತೆರಳಿದ್ದರು. ಈ ವೇಳೆ ಸ್ವತಃ ವಿಶ್ವವಿದ್ಯಾಲಯದ ಅಧಿಕಾರಿ, ಸಿಬ್ಬಂದಿಗಳೇ ಕಾಮಗಾರಿಯ ಕರ್ಮಕಾಂಡವನ್ನು ಹೊರಗೆಡವಿದರು.

ಇಡೀ ವಿಶ್ವವಿದ್ಯಾಲಯದ ಯೋಜನೆಯೇ ಅವೈಜ್ಞಾನಿಕವಾಗಿದೆ. ಯಾವುದೋ ವಾಣಿಜ್ಯ ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರರಿಗೆ ವಿಶ್ವವಿದ್ಯಾಲಯದ ಕಟ್ಟಡ ಗುತ್ತಿಗೆ ನೀಡಲಾಗಿದೆ. ಉಪನ್ಯಾಸಕರ ಕೊಠಡಿ ನಿರ್ಮಾಣದ ಯೋಜನೆಯನ್ನೇ ರೂಪಿಸಲಾಗಿಲ್ಲ, ಅಗತ್ಯ ಪ್ರಮಾಣದ ಶೌಚಾಲಯವನ್ನೂ ನಿರ್ಮಿಸುವ ಪ್ರಸ್ತಾಪವಿಲ್ಲ ಎಂದು ಹಂಗಾಮಿ ಕುಲಪತಿ ವಿಜಯ್ ನಾಗಣ್ಣವರ್ ಹಾಗೂ ಇನ್ನಿತರ ಸಿಬ್ಬಂದಿ ಸಚಿವರೆದುರು ಬಯಲು ಮಾಡಿದರು.

ಕಟ್ಟಡ ಕಾಮಗಾರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಕೈಯಿಂದ ಕೆರೆದರೆ ಇಟ್ಟಿಗೆಗಳು ಕಿತ್ತು ಬರುತ್ತವೆ. ಗಟ್ಟಿಯಾಗಿ ದೂಡಿದರೆ ಕಂಪೌಂಡ್ ವಾಲ್ ಬೀಳುವಂತಿದೆ. ನೀರಿನ ತೀವ್ರ ಕೊರತೆಯಿಂದಾಗಿ ಕ್ಯೂರಿಂಗ್ ಕೂಡ ಮಾಡಲಾಗುತ್ತಿಲ್ಲ. ಗುತ್ತಿಗೆದಾರರನ್ನು ಕೇಳಿದರೆ 10 ವರ್ಷ ಕಟ್ಟಡಕ್ಕೆ ಏನೂ ತೊಂದರೆ ಇಲ್ಲ ಎಂದು ಹೇಳುತ್ತಾರೆ ಎಂದು ಅವರು ಅಲವತ್ತುಕೊಂಡರು.

ಕಂಪೌಂಡ್ ಗೋಡೆ ಮತ್ತಿತರ ಕಾಮಗಾರಿಗಳು ಕಳಪೆಯಾಗಿದ್ದರಿಂದ ಈಗಾಗಲೆ 3 ಬಾರಿ ಗುತ್ತಿಗೆದಾರರಿಗೆ ನೋಟೀಸ್ ನೀಡಲಾಗಿದೆ. ನೀರಿನ ತೀವ್ರ ಸಮಸ್ಯೆ ಇದ್ದು, ತುರ್ತಾಗಿ ನೀರಿನ ವ್ಯವಸ್ಥೆಯಾಗಬೇಕು. ಇಲ್ಲವಾದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವುದಿಲ್ಲ ಎಂದು ವಿಶ್ವವಿದ್ಯಾಲಯ ಕುಲಸಚಿವೆ ರಾಜಶ್ರೀ ಜೈನಾಪುರೆ ಸಚಿವರಿಗೆ ತಿಳಿಸಿದರು.

ವಿಶ್ವವಿದ್ಯಾಲಯದ ಸಿಬ್ಬಂದಿ ವಿವರಣೆ ಕೇಳಿದ ನಂತರ ಸ್ವತಃ ಪ್ರತಿಯೊಂದು ಕಟ್ಟಡಗಳ ಕಾಮಗಾರಿಯನ್ನು ವೀಕ್ಷಿಸಿದ ಸಚಿವ ಸುಧಾಕರ, ಕೆಲ ಕ್ಷಣ ದಂಗಾದರು. ಕ್ವಾಲಿಟಿ ಈಸ್ ವೆರಿ ಪುವರ್, ಈ ರೀತಿಯ ಕಾಮಗಾರಿ ಒಪ್ಪಲು ಸಾಧ್ಯವಿಲ್ಲ. ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು.

ಕಾಮಗಾರಿಯ ಅತ್ಯಂತ ನಿಧಾನ ಗತಿಯಲ್ಲಿ ನಡೆಯುತ್ತಿರುವ ಕುರಿತು ಸಹ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಡೀ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಅವರು ತಿಳಿಸಿದರು.

ತಕ್ಷಣ ಹೊಸದಾಗಿ ಯೋಜನೆ ರೂಪಿಸಬೇಕು. ಸರಕಾರಕ್ಕೆ ಹೆಚ್ಚಿನ ಹೊರೆಯಾಗದಂತೆ ಯೋಜನೆಯನ್ನು ಪುನಃ ತಯಾರಿಸಿ. ಈ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳಕರ್ ಅವರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು,

ಅವರ ಮಾರ್ಗದರ್ಶನದಲ್ಲೇ ಕಾಮಗಾರಿ ಮುಂದುವರಿಯಬೇಕು. ಮನಸ್ಸಿಗೆ ಬಂದಂತೆ ಕಾಮಗಾರಿ ನಡೆಯುವುದನ್ನು ಸಹಿಸಲು ಸಾಧ್ಯವಿಲ್ಲ. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ವೇಳೆ ಅಲ್ಲಿಗೆ ಆಗಮಿಸಿದ್ದ ಹಿರೇಬಾಗೇವಾಡಿಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ರೈತರು, ನಮ್ಮನ್ನು ತಪ್ಪು ದಾರಿಗೆಳೆದು ಕುಡಿಯುವ ನೀರಿನ ಯೋಜನೆಯನ್ನು ತಪ್ಪಿಸಿ, ವಿಶ್ವವಿದ್ಯಾಲಯದ ಯೋಜನೆ ರೂಪಿಸಲಾಗಿದೆ.

ನಮಗೆ ಕುಡಿಯುವ ನೀರಿನ ಯೋಜನೆ ಬೇಕು. ಅದಕ್ಕಾಗಿ ಅಗತ್ಯ ಜಾಗವನ್ನು ಬಿಟ್ಟುಕೊಡಬೇಕು. ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು. ಈಗಾಗಲೆ ಸಾಕಷ್ಟು ರೀತಿಯಲ್ಲಿ ರೈತರಿಗೆ ಹಿಂಸೆ ನೀಡಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು.

ಗುಡ್ಡದ ಮೇಲಿರುವ ಮಲ್ಲಪ್ಪನ ದೇವಸ್ಥಾನಕ್ಕೆ 10 ಎಕರೆ ಭೂಮಿ ಬಿಟ್ಟುಕೊಡುವಂತೆ ಸೂಚಿಸಿದ ಸಚಿವರು, ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸುವಂತೆ ತಿಳಿಸಿದರು. ಇಡೀ ವಿಶ್ವವಿದ್ಯಾಲಯದ ಕಾಮಗಾರಿಯನ್ನು ಸರಕಾರಕ್ಕೆ ಹೆಚ್ಚಿನ ಹೊರೆಯಾಗದಂತೆ ಹೊಸದಾಗಿ ರೂಪಿಸುವಂತೆ ಆದೇಶಿಸಿದರು.

Advertisement

Leave a reply

Your email address will not be published. Required fields are marked *

error: Content is protected !!