ಮೋದಿ ವಿರುದ್ಧ ಗುಡುಗಿದ ಸವದಿ ; ಚಿಕ್ಕೋಡಿಯಲ್ಲಿ ಕೈ ಗೆಲುವು ಪಕ್ಕಾ ಎಂದ ಸಾಹುಕಾರ
ಅಥಣಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆ ದೇಶದಲ್ಲಿನ ಎಲ್ಲಾ ನದಿಗಳ ಜೋಡಣೆ ಮಾಡುವ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸಿ ಭಾರತ ಮಾತೆಗೆ ಹಸಿರು ಸೀರೆ ಉಡಿಸುವದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಕಳೆದ 10 ವರ್ಷಗಳಲ್ಲಿ ಯಾವುದೇ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಕೇವಲ ಸುಳ್ಳು ಹೇಳುತ್ತಾ ಬಂದಿದ್ದಾರೆ. ಸುಳ್ಳು ಹೇಳುವುದೇ ಬಿಜೆಪಿಯವರ ಸಾಧನೆಯಾಗಿದೆ ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದರು.
ಅವರು ಅಥಣಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿ. ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದನಂತರ ದೇಶದ ಜನರು ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದರು.
ಅವರೇ ಹೇಳಿದಂತೆ ಗಂಗಾ ನದಿಯನ್ನ ಕಾವೇರಿ ನದಿಗೆ ಜೋಡಿಸುವುದು, ಕಾವೇರಿ ನದಿಯನ್ನ ಕೃಷ್ಣಾ ನದಿಗೆ ಜೋಡಿಸುವುದು, ದೇಶದ ಪ್ರಮುಖ ನದಿಗಳನ್ನು ಜೋಡಣೆ ಮಾಡುವ ಮೂಲಕ ದೇಶದಲ್ಲಿ ನೀರಾವರಿ ಕ್ರಾಂತಿ ಮಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿದ್ದರು ಇದು ಈವರೆಗೂ ಸಾಧ್ಯವಾಗಿಲ್ಲ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ವಿರೋಧದ ಅಲೆ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ದೇಶದಲ್ಲಿ 250 ಸ್ಥಾನಗಳನ್ನ ಗೆಲ್ಲುವುದು ಬಿಜೆಪಿಯವರಿಗೆ ಸವಾಲಾಗಿದೆ.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಅಂಡರ್ ಪಾಸ್ ಕರೆಂಟ್ ಒಳ್ಳೆಯ ರೀತಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸದಾಶಿವ ಬುಟಾಳಿ, ಚಿದಾನಂದ ಸವದಿ, ಸಿದ್ದಾರ್ಥ ಶಿಂಗೆ, ಅಮೋಘ ಕೊಬ್ಬರಿ, ಸುರೇಶ್ ಮಾಯಣ್ಣನವರ, ಅಸ್ಲಮ್ ನಾಲಬಂದ, ಶ್ರೀಶೈಲ ನಾರಗೊಂಡ, ಸುರೇಶ್ ಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


