ಅಥಣಿ : ಕೆಲವೊಮ್ಮೆ ದೇವರು ವರ ಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹುದೇ ಸಂದರ್ಭ ಸಧ್ಯ ಅಥಣಿ ಹೆಸ್ಕಾಂ ಇಲಾಖೆಯಲ್ಲಿ ಕಂಡುಬಂದಿದ್ದು ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಗೃಹಜ್ಯೂತಿ ಯೋಜನೆಗೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳೇ ಅಡ್ಡಗಾಲಾಗಿದ್ದಾರೆ.

ಹೌದು ರಾಜ್ಯಾದ್ಯಂತ ಜನ ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ಲಾಭ ಪಡೆಯುತ್ತಿದ್ದರೆ, ಇತ್ತ ಅಥಣಿ ತಾಲೂಕಿನಲ್ಲಿ ಅಧಿಕಾರಿಗಳು ಮಾಡುತ್ತಿರುವ ಎಡವಟ್ಟಿನಿಂದ ಜನ ಸರ್ಕಾರದ ಯೋಜನೆ ಲಾಭವನ್ನು ಪಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಒಂದಿಲ್ಲೊಂದು ಕಾರಣ ನೀಡಿ ಜನರನ್ನ ತಪ್ಪು ದಾರಿಗೆ ತಳ್ಳುತ್ತಿರುವ ಅಥಣಿ ಹೆಸ್ಕಾಂ ಸಹಾಯಕ ಅಭಿಯಂತರ  ಜಿ. ಜೆ ಅವಟಿ ಈ ಬಾರಿಯೂ ಜನರ ಯೋಜನೆಗೆ ಕೊಳ್ಳಿ ಇಟ್ಟಿದ್ದಾರೆ.

ಏನಿದು ಪ್ರಕರಣ : 

ಕಳೆದ  ಮೇ ತಿಂಗಳಿಂದ ಗುತ್ತಿಗೆದಾರರ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.  ಗ್ರಾಹಕರಿಗೆ ಒದಗಿಸಬೇಕಾದ ಲೈಟಿಂಗ್ ಶೀಘ್ರ ಸಂಪರ್ಕ, ತಾತ್ಕಾಲಿಕ ಸಂಪರ್ಕ, ವಾಣಿಜ್ಯ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ ವಿದ್ಯುತ್ ಸಂಪರ್ಕ ಕಾಮಗಾರಿಗಳಿಗೆ  ಹೆಸ್ಕಾಂ ಇಲಾಖೆಯಿಂದ ಮೀಟರ್ ಗಳನ್ನ ಅಳವಡಿಸಿ ಗ್ರಾಹಕರಿಗೆ ಬಿಲ್ ನೀಡುತ್ತಿಲ್ಲ. 

ಇದರಿಂದ ನೂರಾರು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಅನೇಕ ಗ್ರಾಹಕರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಗ್ರಹ ಜ್ಯೋತಿ ಸೌಲಭ್ಯ ದೊರಕುತ್ತಿಲ್ಲ. ಹೆಸ್ಕಾಂ ಇಲಾಖೆಯಲ್ಲಿ ಅನೇಕ ತಾಂತ್ರಿಕ  ಸಮಸ್ಯೆಗಳಿದ್ದು ಅವುಗಳನ್ನ  ನಿವಾರಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಗುತ್ತಿಗೆದಾರರ ಅಥಣಿ ತಾಲೂಕು ಅದ್ಯಕ್ಷರಾದ ಜಗನ್ನಾಥ.