ಲಕ್ಷ್ಮಣ ಸವದಿ ಆಪ್ತನ ಸಾವಿಗೆ ಅಸಲಿ ಕಾರಣ ಏನು ಗೊತ್ತಾ…?
ಕಾಗವಾಡ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಹಾಗೂ ಖೀಳೆಗಾಂವ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಪ್ಪ ನಿಂಬಾಳ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಪ್ರಕರಣ ಕುರಿತಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ಎಪ್ರಿಲ್ 3 ರಂದು ಖೀಳೆಗಾಂವ ಗ್ರಾಮದ ಅಣ್ಣಪ್ಪ ನಿಂಬಾಳ ( 58 ) ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಲಾಗಿತ್ತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ಬೆನ್ನು ಬಿದ್ದ ಪೊಲೀಸರಿಗೆ ಕೊಲೆಗೆ ಜಮೀನು ವಿವಾದ ಎಂಬುವುದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಠ್ಠಲ ಪೂಜಾರಿ, ಶಿವಾಜಿ ಹಜಾರೆ, ಸಂತೋಷ ಹೊನಮೋರೆ, ಸುಖದೇವ ಹಜಾರೆ ಎಂಬುವವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಗೆ ಕಾರಣ ; ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ನಿಂಬಾಳ ಕೊಲೆಗೆ ಆಸ್ತಿ ವಿವಾದ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಖಿಳೆಗಾಂವ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಶಹಜಾನ್ ಎಂಬುವವರ ಜಮೀನು ವಿವಾದ ವಿಚಾರವಾಗಿ ಗ್ರಾಮದ ವಿಠ್ಠಲ ಪೂಜಾರಿ ಎಂಬಾತನ ಜೊತೆ ಜಗಳವಾಗಿತ್ತು.
ಈ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಮೃತ ಅಣ್ಣಪ್ಪ ನಿಂಬಾಳ್ ಜಮೀನನ್ನು ಸ್ನೇಹಿತ ಶಹಜಾನ್ ಗೆ ವಾಪಸ್ ಕೊಡಿಸಿದ್ದರು.
ಶಹಜಾನ್ 20 ಗುಂಟೆ ಜಮೀನನ್ನು 9 ಲಕ್ಷ ರೂಪಾಯಿಗೆ ಖರೀದಿಸಿದ್ದ. ಆದ್ರೇ ವಿಠ್ಠಲ ಹಣ ಪಡೆದರು ಜಮೀನನ್ನು ಬಿಟ್ಟು ಕೊಟ್ಟಿರಲಿಲ್ಲ. ಈ ಪ್ರಕರಣದಲ್ಲಿ ಕೊಲೆಯಾದ ಅಣ್ಣಪ್ಪ ಮಧ್ಯಸ್ಥಿಕೆ ವಹಿಸಿದ್ದೇ ಅವರ ಜೀವಕ್ಕೆ ಕುತ್ತು ಬಂದಿದೆ. ಇದೇ ವಿಷಯವಾಗಿ ಅಣ್ಣಪ್ಪನ ಜೊತೆ ಕೊಲೆ ಆರೋಪಿ ವಿಠ್ಠಲ ಜಗಳವಾಡಿದ್ದ.
ಅಣ್ಣಪ್ಪ ನಿಂಬಾಳ್ ಕೊಲೆಗೆ ಸಂಚು ರೂಪಿಸಿದ್ದ ವಿಠ್ಠಲ ಪೂಜಾರಿ ತನ್ನ ಸಂಬಂಧಿಕರ ಸಹಾಯ ಪಡೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಅಷ್ಟೇ ಅಲ್ಲದೆ ನಿಮಗೆ ಹಣಕಾಸಿನ ಸಹಾಯ ಮಾಡುವುದಾಗಿ ಆರೋಪಿತರಿಗೆ ಆಸೆ ತೋರಿಸುವ ಮೂಲಕ ಮುಖಂಡ ಅಣ್ಣಪ್ಪ ಕೊಲೆಯಾಗಿದೆ ಎಂದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.


