
ನಾಲ್ಕು ಮಕ್ಕಳ ಹೆತ್ತರೆ ಭರ್ಜರಿ ಬಹುಮಾನ ; ಜನಸಂಖ್ಯೆ ಹೆಚ್ಚಳಕ್ಕೆ ವಿಶಿಷ್ಠ ಅಭಿಯಾನ

ಮಡಿಕೇರಿ: ನಾಲ್ಕು ಮಕ್ಕಳನ್ನು ಹೆತ್ತರೆ ಬರೋಬ್ಬರಿ 1 ಲಕ್ಷದ ವರೆಗಿನ ಬಹುಮಾನ ಗೆಲ್ಲಬಹುದಾದಂತಹ ವಿಶಿಷ್ಟ ಆಫರ್ ಅನ್ನು ಕೊಡವ ಸಮಾಜ ನೀಡುತ್ತಿದೆ.
ಹೌದು, ಜಿಲ್ಲೆಯಲ್ಲಿ ಕೊಡವರ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆ ಈ ಆಫರ್ ಅನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುವಕರು ಉದ್ಯೋಗಕ್ಕಾಗಿ ದೂರದ ಊರಿಗೆ ಹೋಗುವುದು ಹಾಗೂ ದಂಪತಿಗಳು ಒಂದೇ ಮಗು ಸಾಕು ಎಂದು ನಿರ್ಬಂಧ ಹಾಕುತ್ತಿರುವ ಹಿನ್ನೆಲೆ ಇಲ್ಲಿ ಜನಸಂಖೆಯ ಕಡಿಮೆಯಾಗುತ್ತಿದೆ.
ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದುದಿನ ಕೊಡವ ಜನಸಂಖ್ಯೆ ತೀರಾ ಕಡಿಮೆಯಾಗಿ ನಶಿಸಬಾರದು ಎಂಬ ಕಾರಣಕ್ಕೆ ಜಿಲ್ಲೆಯ ವಿವಿಧ ಊರುಗಳಲ್ಲಿರುವ ತಮ್ಮ ಸಮಾಜದವರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಆಫರ್‌ವೊಂದನ್ನು ಕೊಡವ ಸಮಾಜ ನೀಡಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಕೊಡವ ಸಮಾಜ ಈ ವಿಶಿಷ್ಟ ಆಫರ್ ನೀಡಿದೆ. ಮೂರು ಮಕ್ಕಳಿಗೆ ಜನ್ಮ ನೀಡುವ ಕೊಡವ ಪೋಷಕರಿಗೆ 50 ಸಾವಿರ ರೂ., 4 ಮಕ್ಕಳಿಗೆ ಜನ್ಮ ನೀಡುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಹಣವನ್ನು ಮಗುವಿನ ಹೆಸರಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಟ್ಟು 18 ವರ್ಷ ತುಂಬಿದ ಬಳಿಕ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ 3 ಮತ್ತು 4 ಮಕ್ಕಳನ್ನು ಮಾಡಿಕೊಂಡಿರುವ ತಲಾ ಒಂದೊಂದು ಕುಟುಂಬವನ್ನು ಗುರುತಿಸಿ ಹಣ ನೀಡಿ ಹಾಗೂ ಸನ್ಮಾನ ಕೂಡ ಮಾಡಿದೆ.