Select Page

ಕಿತ್ತೂರು ಉತ್ಸವ ; ಸಂಚಿತ್ ಹೆಗಡೆ – ಶಮಿತಾ ಮಲ್ನಾಡ್ ಅವರಿಂದ ಕಾರ್ಯಕ್ರಮ

ಕಿತ್ತೂರು ಉತ್ಸವ ; ಸಂಚಿತ್ ಹೆಗಡೆ – ಶಮಿತಾ ಮಲ್ನಾಡ್ ಅವರಿಂದ ಕಾರ್ಯಕ್ರಮ

ಬೆಳಗಾವಿ : ಈ ಬಾರಿಯೂ ಕೂಡ ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಗುವುದು. ಉತ್ಸವದ ಪ್ರಮುಖ ವೇದಿಕೆ ನಿರ್ಮಾಣ, ಕುಸ್ತಿ ಕಣ, ಊಟದ ವ್ಯವಸ್ಥೆ, ವಸ್ತಪ್ರದರ್ಶನ, ಬೋಟಿಂಗ್ ಸೇರಿದಂತೆ ಎಲ್ಲ ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಚ.ಕಿತ್ತೂರಿನ ಕೋಟೆ ಆವರಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕಿತ್ತೂರು ಉತ್ಸವದ ಎಲ್ಲ ಸಿದ್ಧತೆ ನಡೆಯುತ್ತಿದ್ದು, ಕಡಿಮೆ ಕಾಲಾವಕಾಶ ಇರುವುದರಿಂದ ಪ್ರತಿಯೊಂದನ್ನು ಖುದ್ಧಾಗಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ.

ಉತ್ಸವದ ಮೊದಲ ದಿನ ಮೆರವಣಿಗೆ ಮುಕ್ತಾಯದ ವೇಳೆ ಮಧ್ಯಾಹ್ನ ನಿಚ್ಚಣಿಕೆ ಮಠದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು. ಉಳಿದ ದಿನಗಳಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಕಲಾವಿದರ ತಂಡಗಳಿಗೂ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುವುದು.

ಐತಿಹಾಸಿಕ ಕಿತ್ತೂರು ಉತ್ಸವದ ಮೊದಲ ದಿನವಾಗಿರುವ ಅ. 23ರಂದು ಪ್ರಸಿದ್ಧ ಗಾಯಕ ಸಂಚಿತ್ ಹೆಗಡೆ ( Sanchit Hegade ) ಕಾರ್ಯಕ್ರಮ ನೀಡುವರು. ಅದೇ ರೀತಿ ಉತ್ಸವದ ಎರಡನೇ ದಿನವಾದ ಅ.24 ರಂದು ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಮೀಸಲಿಡಲಾಗಿದ್ದು, ಅಂದು ಗಾಯಕಿ ಶಮಿತಾ ಮಲ್ನಾಡ ( Shamita Malanad )/ಕಾರ್ಯಕ್ರಮ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.

ಕೋಟೆಯ ಆವರಣದಲ್ಲಿ ಸ್ವಚ್ಛತೆ, ವಸ್ತುಪ್ರದರ್ಶನ, ಫಲ-ಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ ಏರ್ಪಡಿಸಬೇಕು ಹಾಗೂ ಕೋಟೆಗೆ ದೀಪಾಲಂಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ಎಲ್.ಇ.ಡಿ. ಪರದೆಗಳು; ಆಸನಗಳು, ಕುಡಿಯುವ ನೀರು ಹಾಗೂ ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಬಾರಿ ವಸ್ತುಪ್ರದರ್ಶನ ಮಳಿಗೆಗಳನ್ನು ಮೊದಲಿನಂತೆ ಕೋಟೆಯ ಆವರಣದಲ್ಲಿಯೇ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಪ್ರತಿವರ್ಷದಂತೆ ವೇದಿಕೆ ಹಿಂಭಾಗದಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ಸ್ಥಾಪಿಸಲಾಗುವುದು.
ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳಾ ತಂಡಗಳು; ಕಲಾ ತಂಡಗಳು ಹಾಗೂ ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಸಂಬಂಧಿಸಿದ ಉಪ ಸಮಿತಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಉತ್ಸವ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುವುದು ಎಂದರು. ಸಂಚಾರ ದಟ್ಟಣೆ ನಿರ್ವಹಣೆ, ಸಂಚಾರ ನಿರ್ವಹಣೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೇದಿಕೆ ನಿರ್ಮಾಣ, ಕೆರೆ, ಕುಸ್ತಿ ಕಣ, ಮಾಧ್ಯಮ‌ ಕೇಂದ್ರ, ವಸ್ತುಪ್ರದರ್ಶನ ಮಳಿಗೆ, ಆಹಾರ ಮಳಿಗೆ, ಕೋಟೆ ಆವರಣ ಸ್ವಚ್ಛತೆ, ಪಾರ್ಕಿಂಗ್, ಬಂದೋಬಸ್ತ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಅವರು ಪರಿಶೀಲನೆ ನಡೆಸಿದರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಡಿವೈಎಸ್ಪಿ ರವಿ ನಾಯಕ, ಕಿತ್ತೂರು ಇನ್ಸಪೆಕ್ಟರ್ ಮಹಾಂತೇಶ ಹೊಸಪೇಟಿ ಮತ್ತಿತರರು ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖೆ, ಆಹಾರ, ಆರೋಗ್ಯ, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!