
ಕನ್ನಡಮ್ಮ ಮಡಿಲಿಗೆ ಪಾಪು ಪ್ರಶಸ್ತಿ ; ಮನಸ್ಸು ಬಿಚ್ಚಿ ಮಾತಾಡಿದ ಅಕ್ಷರ ಜೀವಿಗಳು

ಧಾರವಾಡ : ಪಾಟೀಲ್ ಪುಟ್ಟಪ್ಪನವರ ಪತ್ರಿಕೋದ್ಯಮದಲ್ಲಿ ಕನ್ನಡದ ಯೋಧರು. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಗೆ ಕೊಡುತ್ತಿರುವುದು ಅಭಿಮಾನದ ಸಂಗತಿ ಎಂದು ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಡಾ. ಎಂ.ಎಸ್.ಶಿವಪ್ರಸಾದ ಹೇಳಿದರು.
ಭಾನುವಾರ ಕರ್ನಾಟಕ ವಿಧ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕನ್ನಡದ ಪ್ರಪಂಚ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರ ಸವಿ ನೆನಪಿನಲ್ಲಿ ಕೊಡಮಾಡುವ ಡಾ. ಪಾಟೀಲ್ ಪುಟ್ಟಪ್ಪನವರ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಯ ಸಂಪಾದಕ ರಾಜಕುಮಾರ ಟೋಪಣ್ಣವರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡಮ್ಮ ದಿನಪತ್ರಿಕೆ ಸಮಾಜದ ಕನ್ನಡಿಯಾಗಿ ಗಡಿ ಭಾಗದ ಜನರ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ತಲುಪಿಸಿ ಪರಿಹಾರ ಕಲ್ಪಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕನ್ನಡ ಪ್ರಭ ಪತ್ರಿಕೆಯ ಧಾರವಾಡ- ಹುಬ್ಬಳಿ ಸ್ಥಾನಿಕ ಸಂಪಾಕದ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಕನ್ನಡಮ್ಮ ಪತ್ರಿಕೆಗೆ ಪಾಪು ಪ್ರಶಸ್ತಿಗೆ ನೀಡುತ್ತಿರುವುದು ಅಮ್ಮನ ಪರವಾಗಿ ಅಪ್ಪನಿಗೆ ಕೊಡುತ್ತಿರುವ ಪ್ರಶಸ್ತಿ. ನನಗೆ ಹಾಗೂ ಸಾವಿರಾರೂ ಪತ್ರಕರ್ತರಿಗೆ ಕನ್ನಡದ ಬರವಣಿಗೆ ಕಲಿಸಿದ ವಿಶ್ವವಿದ್ಯಾಲಯದ ಕನ್ನಡಮ್ಮ ದಿನಪತ್ರಿಕೆ ಎಂದರು.
ಕನ್ನಡಮ್ಮ ಎಂದರೆ ಅಮ್ಮನಿಗೆ ಸಂಬಂಧಿಸಿದ್ದು, ಕನ್ನಡಪ್ರಭ, ಪ್ರಜಾವಾಣಿ ಪ್ರಜೆಗಳಿಗೆ ಸಂಬಂಧಿದ್ದು. ಮರಾಠಿಗರ ಪ್ರಾಬಲ್ಯದಲ್ಲಿ ಗಡಿನಾಡ ಬೆಳಗಾವಿಯಲ್ಲಿ ಕನ್ನಡ ಉಳಿಸಲು ಹೋರಾಟ ನಡೆಸಿದ್ದು ಕನ್ನಡಮ್ಮ ದಿನಪತ್ರಿಕೆ. ಎಂಇಎಸ್ ಮುಖಂಡರಿಗೆ ನಡುಕ ಹುಟ್ಟಿಸಿದ್ದು ಕನ್ನಡಮ್ಮ ದಿನಪತ್ರಿಕೆ ಎಂದರು.
ಬೆಳಗಾವಿಯ 18 ವಿಧಾನಸಭಾ ಮತಕ್ಷೇತ್ರದಲ್ಲಿ 5 ಮತಕ್ಷೇತ್ರದಲ್ಲಿ ಎಂಇಎಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಆಗ ಎಂಇಎಸ್ ಪುಂಡಾಟಿಕೆ ಸದ್ದು ಅಡುಗಿಸಲು ಕನ್ನಡಮ್ಮ ದಿನಪತ್ರಿಕೆ ಯನ್ನು ಎಂ.ಎಸ್.ಟೋಪಣ್ಣವರ ದಿಟ್ಟತನದ ಹೋರಾಟ ಮಾಡಿ 1972ರಲ್ಲಿ ಸ್ಥಾಪನೆ ಮಾಡಿದರು ಎಂದರು.
ಎಲ್ಲ ಪತ್ರಿಕೆಯ ಹುಟ್ಟಿದ್ದು ಸಮಾಜದ ಕಳಕಳಿಯ ಬಗ್ಗೆ ಆದರೆ ಎಂ.ಎಸ್.ಟೋಪಣ್ಣವರ ಅವರು ಮರಾಠಿಗರ ಅಟ್ಟಹಾಸ ಸದ್ದು ಅಡುಗಿಸಲು ಕನ್ನಡಮ್ಮ ದಿನಪತ್ರಿಕೆ ಆರಂಭಿಸಿದರು ಎಂದು ಹೇಳಿದರು.
ಬೆಳಗಾವಿ, ಚಿಕ್ಕೋಡಿ, ಗೋಕಾಕ, ಖಾನಾಪುರದಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿತ್ತು. ಆಗ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರ ಕನ್ನಡದ ಹೋರಾಟ ನಡೆಸಿದಾಗ ಕನ್ನಡಮ್ಮ ದಿನಪತ್ರಿಕೆಯಲ್ಲಿ ಎಂ.ಎಸ್.ಟೋಪಣ್ಣವರ ಅವರು ಮುಖಪುಟದಲ್ಲಿ ದೊಡ್ಡದಾಗಿ ಸುದ್ದಿ ಪ್ರಕಟಿಸಿ ಕನ್ನಡಿಗರನ್ನು ಪ್ರೋತ್ಸಾಹ ಮಾಡುವ ಕೆಲಸ ಮಾಡಿದ್ದು ಇತಿಹಾಸವಾಗಿದೆ ಎಂದರು.
ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಕನ್ನಡದ ಮೇಯರ್ ಸಿದ್ದನಗೌಡ ಪಾಟೀಲ್ ಆಗಲು ಕಾರಣ ಕನ್ನಡಮ್ಮ ದಿನಪತ್ರಿಕೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾಗಿದ್ದು ಕನ್ನಡಮ್ಮ ದಿನಪತ್ರಿಕೆಯ ಹೋರಾಟದ ಛಲದಿಂದ ಇದು ಇತಿಹಾಸದ ಪುಟಗಳಲ್ಲಿ ಸೇರಿದೆ ಎಂದರು.
ಕನ್ನಡಮ್ಮ ದಿನಪತ್ರಿಕೆಯಲ್ಲಿ 2004ರಲ್ಲಿ ನಾನು ಕೆಲಸ ಮಾಡಿದ್ದೇನೆ. ಕನ್ನಡದ ಪತ್ರಕರ್ತರನ್ನು ಸದೃಢ ಮಾಡುವ ಕೆಲಸ ಮಾಡುತ್ತಿದ್ದೆ. ಕೇವಲ ಸುದ್ದಿ ಮಾಡುವುದು ಮಾತ್ರವಲ್ಲ. ಶಿಸ್ತು, ಸಂಯಮವನ್ನು ಕಲಿಸುವ ಗುರುಕುಲ ಕನ್ನಡಮ್ಮ ದಿನಪತ್ರಿಕೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕನ್ನಡಮ್ಮ ದಿನಪತ್ರಿಕೆ ಸಂಪಾದಕ ರಾಜಕುಮಾರ ಟೋಪಣ್ಣವರ ಮಾತನಾಡಿ, ಕನ್ನಡಮ್ಮ ದಿನ ಪತ್ರಿಕೆ ಪತ್ರಕರ್ತ ವಿಶ್ವವಿದ್ಯಾಲಯ ಅಲ್ಲ. ಬೆಳಗಾವಿಯಲ್ಲಿ ಸಾಕಷ್ಟು ಕನ್ನಡ ಹೋರಾಟಗಾರನ್ನು ರೂಪಿಸಿದೆ. ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಕನ್ನಡಮ್ಮ ಸಿಬ್ಬಂದಿಗಳು ಸಾಕಷ್ಟು ಶ್ರಮಪಟ್ಟಿದ್ದಾರೆ. ಕನ್ನಡವನ್ನು ಕಟ್ಟುವುದರ ಜೊತೆಗೆ ಬೆಳಗಾವಿಯ ಜನರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸುವ ಜವಾಬ್ದಾರಿ ಕನ್ನಡಮ್ಮ ದಿನಪತ್ರಿಕೆ ಮಾಡುತ್ತ ಬರುತ್ತಿದೆ ಎಂದರು.
ಚಿಕ್ಕ ವಯಸ್ಸಿನಲ್ಲೇ ಕನ್ನಡಮ್ಮ ದಿನಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡು ನನ್ನ ತಂದೆ, ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ನಡೆಸುವುದು ಕಷ್ಟದ ಕೆಲಸ. ಕಾರ್ಪೋರೆಟ್ ಜಗತ್ತಿನಲ್ಲಿ ಪತ್ರಿಕೆಯನ್ನು ಮುನ್ನಡೆಸುತ್ತಿರುವುದು ಸವಾಲಿನ ಕೆಲಸವಾಗಿದೆ ಎಂದರು.
ನಮ್ಮ ತಂದೆ ದಿ. ಎಂ.ಎಸ್.ಟೋಪಣ್ಣವರ ಅವರ ಕಾಲದಿಂದಲೂ ಪಾಟೀಲ್ ಪುಟ್ಟಪ್ಪನವರ ಬಗ್ಗೆ ಅಪಾರವಾದ ಗೌರವ ಇದೆ. ಅವರ ಸವಿ ನೆನಪಿನಲ್ಲಿ ಕನ್ನಡಮ್ಮ ಪತ್ರಿಕೆಗೆ ಕೊಡುತ್ತಿರುವ ಈ ಪ್ರಶಸ್ತಿಯನ್ನು ನನ್ನ ಕನ್ನಡಮ್ಮನ ಸಿಬ್ಬಂದಿಗಳು ಹಾಗೂ ಕನ್ನಡದ ಹೋರಾಟಗಾರರ ಶ್ರಮಕ್ಕೆ ಸಂದ ಫಲ ಎಂದರು.
ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕೀರ್ತಿ ಟೋಪಣ್ಣವರ, ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.