ಹುಕ್ಕೇರಿ ಸ್ವಾಮೀಜಿ ದಿಕ್ಕು ತಪ್ಪಿಸಿದ ಮಹದಾಯಿ ವಿರೋಧಿ ಹೋರಾಟಗಾರರು ; ಶ್ರೀಗಳ ಸ್ಪಷ್ಟನೆ..!
ಬೆಳಗಾವಿ : ಕಳೆದ ವಾರ ಬೆಳಗಾವಿ ನಗರದಲ್ಲಿ ನಡೆದ ಮಹದಾಯಿ ವಿರೋಧಿ ಹೋರಾಟದ ವಿರುದ್ಧ ಸಧ್ಯ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ದಶಕಗಳ ರೈತರ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿರುವವರ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಮಹದಾಯಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ಹುಕ್ಕೇರಿ ಹಿರೇಮಠದ ಸ್ವಾಮೀಜಿಗಳ ದಿಕ್ಕು ತಪ್ಪಿಸುವ ಕೆಲಸವನ್ನು ಹೋರಾಟಗಾರರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಖುದ್ದು ಹುಕ್ಕೇರಿ ಹಿರೇಮಠದ ಶ್ರೀ.ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ಕೆಲ ಸಂಘಟಕರು ನಮ್ಮ ಬಳಿ ಬಂದು ಪರಿಸರ ರಕ್ಷಣೆ ಮಾಡುವ ಕುರಿತು ರ್ಯಾಲಿ ಆಯೋಜಿಸಲಾಗಿದೆ. ಎಲ್ಲ ಸಮಾಜದ ಸ್ವಾಮೀಜಿ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ನೀವು ಬಂದು ಭಾಗವಹಿಸಬೇಕು ಎಂದಾಗ ಪರಿಸರ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಒಂದು ಕ್ಷಣವೂ ಯೋಚಿಸದೆ ರ್ಯಾಲಿಯಲ್ಲಿ ಭಾಗಿಯಾಗಿದ್ದೆ.
ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾದಾಗ ಗೊತ್ತಾಯಿತು ಆ ರ್ಯಾಲಿ ಮಹದಾಯಿ ಹೋರಾಟದ ವಿರೋಧವಾಗಿತ್ತು ಎಂದು. ನಾಡು, ನುಡಿ, ಜಲದ ವಿಚಾರವಾಗಿ ಹೋರಾಟ ಮಾಡಿಕೊಂಡ ಬಂದ ನಾನು ಮಹದಾಯಿ ಹೋರಾಟದ ಪರವಾಗಿರುವ ನಾವು ಆ ವಿಷಯ ತಿಳಿದ ತಕ್ಷಣವೇ ಅಲ್ಲಿಂದ ಹೊರಟುಬಂದೆವು, ಸಂಘಟಕರು ನಮಗೆ ದಿಕ್ಕು ತಪ್ಪಿಸುವಂತೆ ಮಾಡಿದ್ದರು. ಪೂರ್ವಾಪರ ವಿಚಾರಿಸದೆ ನಾವು ಅಲ್ಲಿಗೆ ಹೋಗಬಾರದಿತ್ತು, ಆ ವಿಷಯದ ಬಗ್ಗೆ ನಮಗೆ ಅಸಮಾಧಾನವಿದೆ.ಅದಕ್ಕೆ ವಿಷಾದಿಸುತ್ತೇವೆ.
ಇಂತಿ…ಶ್ರೀ.ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು. ಹಿರೇಮಠ, ಹುಕ್ಕೇರಿ.


