ಪ್ರೇಮ ವಿವಾಹಕ್ಕೆ ಬಲಿಯಾದ ಗರ್ಭಿಣಿ ಯುವತಿ ; ತಂದೆಯಿಂದಲೇ ಮಗಳ ಹತ್ಯೆ..!
ಹುಬ್ಬಳ್ಳಿ : ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯ ಪಾಟೀಲ (20) ಕೊಲೆಗೀಡಾದ ಗರ್ಭಿಣಿ. ಯುವತಿಯ ತಂದೆ ತಂದೆ ಪ್ರಕಾಶಗೌಡ ಪಾಟೀಲ, ಕುಟುಂಬಸ್ಥರಾದ ಗುರುಸಿದ್ದನಗೌಡ ಪಾಟೀಲ ಹಾಗೂ ಅಕ್ಷಯಗೌಡ ಕೊಲೆ ಮಾಡಿರುವ ಆರೋಪಿಗಳು.
ಮಾನ್ಯ ಪಾಟೀಲ ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸಿದ್ದಳು. ಈ ಮದುವೆಗೆ ಮೇಲ್ವರ್ಗಕ್ಕೆ ಸೇರಿದ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯಿತಿಯ ಬಳಿಕ ಏಳು ತಿಂಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ನಂತರ ಪ್ರಾಣ ಭಯದಿಂದ ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದ ದಂಪತಿ, ಡಿಸೆಂಬರ್ 8ರಂದು ಊರಿಗೆ ಮರಳಿದ್ದರು.
ಆದರೆ, ವೈರತ್ವದ ಕಿಚ್ಚು ಹಚ್ಚಿಕೊಂಡಿದ್ದ ಯುವತಿಯ ತಂದೆ, ಇತರರು ಭಾನುವಾರ ಸಂಜೆ ವಿವೇಕಾನಂದನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ್ದಾರೆ.


