ಸುಸಂಸ್ಕೃತ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ನನ್ನು ಅಪ್ಪಿಕೊಳ್ಳುವರಾ ಬೆಳಗಾವಿ ಮತದಾರರು…?
ಬೆಳಗಾವಿ : ಬೆಳಗಾವಿ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಇಂದ ಕಣಕ್ಕಿಳಿದರೆ ಇತ್ತ ಯುವ ನಾಯಕ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಮೂಲಕ ಕಮಲ ಪಾಳೆಯಕ್ಕೆ ಆರಂಭಿಕ ಪೆಟ್ಟು ನೀಡಿದ್ದಾರೆ.
ದಶಕಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಗೆದ್ದು ಬೀಗಿರುವ ಬಿಜೆಪಿಗೆ ಈ ಬಾರಿ ಪ್ರಭಲ ಪೈಪೋಟಿ ಎದುರಾಗಿದೆ. ಸ್ಥಳಿಯ ಬಿಜೆಪಿ ನಾಯಕರ ಅಸಮಾಧಾನವೂ ಕಮಲ ಪಾಳೆಯಕ್ಕೆ ಮತ್ತೊಂದು ಅಘಾತ ನೀಡಿದೆ. ಆದರೆ ಕಾಂಗ್ರೆಸ್ ಮಾತ್ರ ಆತ್ಮವಿಶ್ವಾಸದಿಂದ ಮತಭೇಟೆ ಮುಂದುವರಿಸಿದ್ದು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದೆ.
ರಾಜಕೀಯವಾಗಿ ಪ್ರಬಲವಾಗಿರುವ ಬೆಳಗಾವಿ ಇನ್ನೂ ಅಭಿವೃದ್ಧಿಯಿಂದ ಹಿಂದೆ ಉಳಿದಿದ್ದು ಮಾತ್ರ ಸತ್ಯ. ಆಳುವ ಪಕ್ಷದ ನಾಯಕರು ಹೇಳಿಕೊಳ್ಳುವಂತ ಅಭಿವೃದ್ಧಿ ಮಾಡಿಲ್ಲ ಎಂಬುದು ಜನರ ವಾದ. ಕಳೆದ ಹತ್ತು ವರ್ಷಗಳಿಂದ ಜಿಲ್ಲೆ ಅಂತಹ ಮಹತ್ವದ ಅಭಿವೃದ್ಧಿ ಹೊಂದಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯ ಮತದಾರ ಈ ಬಾರಿ ಹೊಸತನದ ಆಯ್ಕೆಯಲ್ಲಿ ಉತ್ಸುಕನಾಗಿದ್ದಾನೆ.
ವಿದ್ಯಾವಂತ ಹಾಗೂ ಸುಸಂಸ್ಕೃತ ನಡತೆಯಿಂದಲೇ ಜಿಲ್ಲೆಯ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾದ ಮೃಣಾಲ್ ಹೆಬ್ಬಾಳ್ಕರ್ ಈ ಬಾರಿ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಒಂದು ಅವಕಾಶ ನೀಡಿ ನಂತರ ನನ್ನ ಕೆಲಸದ ಮೂಲಕ ನಿಮ್ಮ ಸೇವೆ ಮಾಡುತ್ತೇನೆ ಎಂಬ ಉತ್ಸಾಹದಲ್ಲಿ ಇವರಿದ್ದಾರೆ. ಜಿಲ್ಲೆಯ ಯುವಕರಿಗೆ ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಭರವಸೆ ನೀಡುವ ಮೂಲಕ ಮೃಣಾಲ್ ಮತದಾರರ ಮನಸ್ಸು ಗೆಲ್ಲುತ್ತಿದ್ದಾರೆ.
ಈಗಾಗಲೇ ಎರಡೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಆದರೆ ಕಾಂಗ್ರೆಸ್ ಮಾತ್ರ ಒಂದು ಹೆಜ್ಜೆ ಮುಂದಿದ್ದು ಜನಸಾಮಾನ್ಯರನ್ನು ತಲುಪುವ ಕೆಲಸ ಮಾಡುತ್ತಿದೆ. ಒಂದು ಕಡೆ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಭರವಸೆ ಈಡೇರಿಸಿರುವ ತೃಪ್ತಿ ಕೈ ಪಾಳೆಯಕ್ಕೆ ಇದ್ದು ಇದೇ ಆಧಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ಕೈ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾಗಿ, ಸಚಿವರಾಗಿ ಅಪಾರ ಅನುಭವ ಹೊಂದಿರುವ ಜಗದೀಶ್ ಶೆಟ್ಟರ್ ಒಂದು ಕಡೆಯಾದರೆ ತಾಯಿಯ ಬಲ ಹಾಗೂ ಜನರ ಬೆಂಬಲ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಮತ್ತೊಂದು ಕಡೆ ಸ್ಪರ್ಧೆ ಒಡ್ಡುತ್ತಿದ್ದು ಕೊನೆಗೆ ಬೆಳಗಾವಿ ಜನ ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ಎಂಬುದು ಅಂತಿಮ.