ಗೃಹಲಕ್ಷ್ಮೀ ಹಣದಲ್ಲಿ ಮಗನಿಗೆ ಬೈಕ್ ಕೊಡಿಸಿದ ತಾಯಿ
ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಗ್ಯಾರಂಟಿ ಯೋಜನೆ ಸಧ್ಯ ನಾಡಿನ ಜನರ ಪಾಲಿಗೆ ಭರವಸೆಯ ಬೆಳಕಾಗಿವೆ. ಹತ್ತಾರು ವರ್ಷ ಕಂಡಿದ್ದ ಕನಸು ಒಂದು ಯೋಜನೆಯ ಮುಖೇನ ನನಸಾಗುತ್ತಿರುವುದು ಮತ್ತೊಂದು ವಿಶೇಷ.
ಹೌದು ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕೂಡಿಟ್ಟು, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸುತ್ತಿದ್ದಾರೆ. ಶುಕ್ರವಾರ ಬೈಕ್ ಖರೀದಿಸಲು ಮುಂಗಡ ಹಣ ನೀಡಿದ್ದಾರೆ.
‘ಗೃಹಲಕ್ಷಿ’ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಅದರಂತೆ ತಾಯಿಯೊಬ್ಬಳು ತನ್ನ ಮಗನಿಗೆ ಬೈಕ್ ಕೊಡಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಮಹಾನವಮಿ ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮೀ ಹಣ ನೀಡಿರುವ ವಿಷಯ ಕೇಳಿ ಖುಷಿಯಾಗಿದೆ. ತಾಯಿ -ಮಗನಿಗೆ ಮನಃಪೂರ್ವಕವಾಗಿ ಶುಭ ಕೋರುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.


