ಶಾಲೆಗೆ ಚಕ್ಕರ್ ಹಾಕಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಸರ್ಕಾರಿ ಶಾಲೆ ಶಿಕ್ಷಕರಿಗೆ ಸಚಿವ ನಾಗೇಶ್ ಖಡಕ್ ಎಚ್ಚರಿಕೆ
ಬೆಳಗಾವಿ : ಸರ್ಕಾರಿ ಶಾಲೆ ಶಿಕ್ಷಕರು ಕ್ಲಾಸಿಗೆ ಚಕ್ಕರ್ ಹಾಕಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಪ್ರಕರಣ ಬೆಳಕಿಗೆ ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ರಾಜ್ಯದಲ್ಲಿ ಒಟ್ಟು 48 ಸಾವಿರ ಶಾಲೆಗಳನ್ನು ನಡೆಸುತ್ತಿದ್ದೇವೆ. 77 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇವೆ. ಬೆಟ್ಟ, ತೋಟದ ಮನೆಯಲ್ಲಿ ಶಾಲೆಗಳಿವೆ ಎನ್ನುವ ಆರೋಪವೂ ಇದೆ. ಇದಕ್ಕೆ ನಾವು ಎರಡ್ಮೂರು ಯೋಚನೆ ಮಾಡುತ್ತೇವೆ. ಶಿಕ್ಷಕರನ್ನು ಪರೀಕ್ಷೆಯ ಮೂಲಕ ಸರಿ ಮಾಡುವುದು ತಾತ್ವಿಕವಾಗಿ ಸರಿಯಲ್ಲ. ಆದರೂ ಈಗೀನ ತಂತ್ರಜ್ಞಾನ ಉಪಯೋಗಿಸಿ ಮಾಡೋಣ ಎಂದರೆ ಬೇಕಾದಷ್ಟು ಕಡೆ ನೆಟ್ ಇಲ್ಲ. ಯಾರು ಒಳ್ಳೆಯವರಿದ್ದಾರೆ ಅವರು ಶಾಲೆಗೆ ಬಂದೆ ಬರುತ್ತಾರೆ. ಕೆಲ ಶಿಕ್ಷಕರು ಶಾಲೆ ಮುಗಿಯುವ ಮುನ್ನವೇ ಮನೆಗೆ ಹೋಗುವವರಿದ್ದಾರೆ. ಅಂಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ತಾಲೂಕಿನಲ್ಲಿ ಶಿಕ್ಷಕರು ಶಾಲೆಗೆ ಚಕ್ಕರ ಹಾಕಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಖಚಿತವಾದ ಮಾಹಿತಿ ನೀಡಿದರೆ ಅಂಥ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಸಿದರು.