
ಸಾಹುಕಾರ್ ಹೊಸ ಆಟ ; ಚನ್ನಪಟ್ಟಣ ಅಖಾಡಕ್ಕೆ ಜಾರಕಿಹೊಳಿ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ರಮೇಶ್ ಜಾರಕಿಹೊಳಿ ಒಬ್ಬರು. ಇತ್ತ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಬಹಿರಂಗ ಸಮರಕ್ಕೆ ಮುಂದಾಗಿರುವ ರಮೇಶ್ ಜಾರಕಿಹೊಳಿ ಸಧ್ಯ ಚನ್ನಪಟ್ಟಣ ಅಖಾಡಕ್ಕೆ ಇಳಿದಿದ್ದಾರೆ.
ಹೌದು ಚನ್ನಪಟ್ಟಣ ಕ್ಷೇತ್ರದ ಶಾಸಕ ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಅಖಾಡಕ್ಕೆ ಇಳಿದು ಮಂಡ್ಯದಿಂದ ಸ್ಪರ್ಧಿಸಿ ಸಧ್ಯ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಮುಂದೆ ಬರುವ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ.
ಇವೆಲ್ಲದರ ಮಧ್ಯೆ, ಕಳೆದ 2019 ರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ಮುನಿಸು ಮರೆತು ಒಂದಾದಂತೆ ಕಾಣುತ್ತಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಬದ್ಧ ಎದುರಾಳಿ ಡಿಕೆಶಿ ಮಣಿಸಲು ಇಬ್ಬರು ನಾಯಕರು ಒಂದಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ದೆಹಲಿ ಭೇಟಿ ನೀಡಿರುವ ರಮೇಶ್ ಜಾರಕಿಹೊಳಿ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಮಾಡಿ ಚನ್ನಪಟ್ಟಣ ಉಪ ಚುನಾವಣೆ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಆಪ್ತ ಸ್ನೇಹಿತ ಸಿ.ಪಿ ಯೋಗೇಶ್ವರ ಅವರ ಜೊತೆ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಅತ್ತ ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಸಹೋದರ ಸುರೇಶ್ ಅವರ ಸೋಲಿನಿಂದ ಕಂಗೆಟ್ಟಿರುವ ಡಿಸಿಎಂ ಮತ್ತೊಂದು ಸುತ್ತಿನ ಚುನಾವಣಾ ಯುದ್ಧಕ್ಕೆ ಸಿದ್ದರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಾವು ಪ್ರತಿನಿಧಿಸುವ ಕನಕಪುರ ಕ್ಷೇತ್ರವನ್ನು ಸಹೋದರ ಸುರೇಶ್ ಗೆ ಬಿಟ್ಟುಕೊಟ್ಟು ಚನ್ನಪಟ್ಟಣ ಉಪ ಚುನಾವಣೆ ಎದುರಿಸಲು ಡಿಕೆಶಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಡಿಕೆಶಿ ಉಪ ಚುನಾವಣೆ ಕಣಕ್ಕೆ ಇಳಿಯುವ ಸುದ್ದಿ ಹೊರಬರುತ್ತಿದ್ದಂತೆ ಇತ್ತ ರಮೇಶ್ ಜಾರಕಿಹೊಳಿ ಆ್ಯಕ್ಟಿವ್ ಆಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಲಿನ ನಂತರ ಪುಟಿದೆದ್ದಿರುವ ಇವರು, ಇನ್ನೊಮ್ಮೆ ಕನಕಪುರ ಬಂಡೆಗೆ ಟಕ್ಕರ್ ಕೊಡಲು ಸಿದ್ಧತೆ ನಡೆಸಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ವಿರೋಧಿಗಳ ನಡುವೆ ನಡೆಯುತ್ತಿರು ಜಿದ್ದಾಜಿದ್ದು ಯಾವ ಮಟ್ಟಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.