ಅನೈತಿಕ ಸಂಬಂಧಕ್ಕೆ ಪತ್ನಿಯನ್ನು ಕೊಂದ ಪತಿ
ದಾವಣಗೆರೆ : ವ್ಯಕ್ತಿಯೊಬ್ಬ ಅನೈತಿಕ ಸಂಬಂಧಕ್ಕಾಗಿ ಎರಡನೇ ಪತ್ನಿಯನ್ನು ನೀರಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ನಡೆದಿದೆ.
ಗೌರಮ್ಮ (39) ಮೃತ ದುರ್ದೈವಿ ಹಾಗೂ ಚಿದಾನಂದ ಆಚಾರ್ಯ ಕೊಲೆ ಮಾಡಿದ ಆರೋಪಿ. ಚಿದಾನಂದ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿ, ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಗೌರಮ್ಮ ಎಂಬುವರನ್ನು 4
ತಿಂಗಳ ಹಿಂದಷ್ಟೇ ಮದುವೆಯಾಗಿದ್ದನು. ಗೌರಮ್ಮ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲನೇ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದ.
ಆದರೆ ಎರಡನೇ ಪತಿ ಚಿದಾನಂದನಿಗೆ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧವಿದ್ದು, ಓರ್ವ ಮಹಿಳೆಗೆ ಸಾಕಷ್ಟು ಹಣ ನೀಡಿದ್ದ. ಇದೇ ವಿಚಾರಕ್ಕೆ ಹಿಂದೊಮ್ಮೆ ಗಲಾಟೆಯಾಗಿ ಮಹಿಳಾ ಸಾಂತ್ವನ ಕೇಂದ್ರ ಮತ್ತು ಹಿರಿಯರ ಸಮ್ಮುಖದಲ್ಲಿ ರಾಜಿಸಂಧಾನವೂ ಆಗಿತ್ತು ಎನ್ನಲಾಗಿದೆ.
ಇಷ್ಟಾದರೂ ಚಿದಾನಂದ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದಾನೆ. ಈ ವಿಚಾರಕ್ಕೆ ಆಗಾಗ್ಗೆ ದಂಪತಿ ನಡುವೆ ಜಗಳ ಆಗುತ್ತಿತ್ತು. ಪತಿ ಚಿದಾನಂದ ತೋಟದಲ್ಲಿ ಕೆಲಸ ಇದೆ ಬಾ ಅಂತ ಪತ್ನಿ ಗೌರಮ್ಮಳನ್ನು ಜಮೀನಿಗೆ ಕರೆದುಕೊಂಡು
ಹೋಗಿದ್ದನು. ತೋಟಕ್ಕೆ ನೀರು ಹರಿಸಲೆಂದು ಹೊಲದಲ್ಲಿ ಚಿಕ್ಕ ಕಾಲುವೆ ಮಾಡಲಾಗಿತ್ತು. ಕಾಲುವೆ ನೀರಿನಲ್ಲಿ ಗೌರಮ್ಮಳನ್ನು ಮುಳುಗಿಸಿ ಸಾಯಿಸಿ, ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿ ಗೌರಮ್ಮ ಪೋಷಕರು ಚಿದಾನಂದನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ತನಿಖೆ ನಡೆಸಿದ ಪೊಲೀಸರು ಚಿದಾನಂದ ಆಚಾರ್ಯನನ್ನು ಹೊಸದುರ್ಗದಲ್ಲಿ ಬಂಧಿಸಿದ್ದಾರೆ.