ಕಾಂಗ್ರೆಸ್ ವಿರುದ್ಧ ಆಕ್ರೋಶ ; ಬಿಜೆಪಿ ಸೇರಿದ ಮುಸ್ಲಿಂ ಮುಖಂಡರು..!
DAVANGERE SOUTH : ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಮುನ್ನ ಕಾಂಗ್ರೆಸ್ನಲ್ಲಿ ಅಸಮಾಧಾನ – ಬಿಜೆಪಿ ಸೇರಿದ ಮುಸ್ಲಿಂ ಕಾರ್ಯಕರ್ತರು.!
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಮುನ್ನ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ತೀವ್ರಗೊಂಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆ ಹಲವು ಅಲ್ಪಸಂಖ್ಯಾತ ಮುಖಂಡರು ಹಾಗೂ ಯುವ ನಾಯಕರು B J P ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಲ್ಪಸಂಖ್ಯಾತರನ್ನು ಪಕ್ಷಕ್ಕೆ ಸೇರಿಸುವುದಾಗಿ ಮುಖಂಡರು ತಿಳಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಕಡೆಗಣಿಸಿರುವುದರಿಂದ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಕೆಲ ಮುಖಂಡರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದು, ಇದು ಕ್ಷೇತ್ರದ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ಕಾರಣವಾಗುವ ಸಾಧ್ಯತೆ ಮೂಡಿಸಿದೆ.
ಈ ಕ್ಷೇತ್ರವು ದೀರ್ಘಕಾಲದಿಂದ ಶಾಮನೂರು ಶಿವಶಂಕರಪ್ಪ ಕುಟುಂಬದ ಪ್ರಭಾವದಲ್ಲಿದೆ ಎನ್ನಲಾಗುತ್ತಿದ್ದು, ಈ ಬಾರಿ ಅವರ ಮೊಮ್ಮಗ ಸಮರ್ಥ್ ಅವರಿಗೆ ಅವಕಾಶ ನೀಡಿರುವುದು ಒಳಾಂಗಣ ಚರ್ಚೆಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಮತದಾರರನ್ನು ನಿರ್ಲಕ್ಷಿಸಲಾಗಿದೆ ಎಂಬುದು ಅಸಮಾಧಾನಿತ ಮುಖಂಡರ ಆರೋಪವಾಗಿದೆ.
ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಕೂಡ ಸಮುದಾಯಕ್ಕೆ ಗೌರವ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ರಾಜಕೀಯ ತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ನಗರದ ಅಖ್ತಾರ್ ರಾಜ್ ವೃತ್ತದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ, ಪಕ್ಷದ ನಿರ್ಧಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸಚಿವ A. S. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ಪಕ್ಷದೊಳಗಿನ ಅಸಮಾಧಾನ ಶೀಘ್ರದಲ್ಲೇ ಶಮನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಉಪಚುನಾವಣೆಗೆ ಮುನ್ನ ಉಂಟಾಗಿರುವ ಈ ಬೆಳವಣಿಗೆ ಕ್ಷೇತ್ರದ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.


