
ಸಿದ್ದು ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು..? ; ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳಗಾವಿ : ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದ ಬೆಳಗಾವಿ ಜನರಿಗೆ ಯಾವುದೇ ನಿರಾಶೆಯಾಗದ ರೀತಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಬಹು ನಿರೀಕ್ಷಿತ ಬೆಳಗಾವಿ ನಗರದಲ್ಲಿ ಫ್ಲೈ ಓವರ್ ನಿರ್ಮಾಣ ಸೇರಿದಂತೆ ಕೆಲ ಯೋಜನೆಗೆ ಘೋಷಿಸಿದ್ದು ಜನ ನಿರಾಳರಾಗಿದ್ದಾರೆ.
ಬೆಳಗಾವಿ ನಗರದಲ್ಲಿ ಉಂಟಾಗುತ್ತಿರುವ ವಾಹಣ ದಟ್ಟಣೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 450 ಕೋಟಿ ವೆಚ್ಚದಲ್ಲಿ 4.50 ಕಿ.ಮೀಟರ್ ಮೇಲ್ಸೆತುವೆ ನಿರ್ಮಾಣ ಕಾಮಗಾರಿನ್ನು ಕೇಂದ್ರ ಹೆದ್ದಾರಿ ಪ್ರಾಧಿಕಾರದ ಜೊತೆ ಸೇರಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಬೆಳಗಾವಿ ನಗರ ಜನರಿಗೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ.
ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಸ್ತುತ ಬಜೆಟ್ ನಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ಇನ್ನೂ ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲೇ ಘೋಷಣೆ ಮಾಡಲಾಗಿದ್ದ ಗೋಕಾಕ್ ಜಲಪಾತವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆ ಚಾಲನೆ ನೀಡುವ ಭರವಸೆ ಲಭಿಸಿದೆ.
1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಜಿ ಭಾಗವಹಿಸಿದ್ದು ಮಾತ್ರವಲ್ಲದೆ ಅವರು ಅಧ್ಯಕ್ಷರಾಗಿದ್ದ ಏಕೈಕ ಅಧಿವೇಶನ ಎಂಬ ಹೆಗ್ಗಳಿಕೆ ಬೆಳಗಾವಿಗೆ ಇದೆ. ಈ ಹಿನ್ನಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವುದು ಹಾಗೂ ಕರ್ನಾಟಕದಲ್ಲಿ ಗಾಂಧಿಜಿ ಭೇಟಿ ನೀಡಿದ್ದ ಸ್ಥಳಗಳಲ್ಲಿ ಸ್ಮರಣಾರ್ಥ ಫಲಕ ಅಳವಡಿಸುವ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಅಥಣಿ ತಾಲೂಕಿನ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ, ಸೇರಿದಂತೆ ಬೈಲಹೊಂಗಲ ಹಾಗೂ ವಿವಿಧ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆ ಕೈಗೊಳ್ಳುವ ಭರವಸೆಯನ್ನು ಬಜೆಟ್ ನಲ್ಲಿ ಸಿಎಂ ಭರವಸೆ ನೀಡಿದ್ದು ಜನರಲ್ಲಿ ಸಂತಸ ಮೂಡಿಸಿದೆ. ಇನ್ನೂ ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ನಿರೀಕ್ಷೆಯಲ್ಲಿದ್ದ ಜನರಿಗೆ ಈ ಬಾರಿ ನಿರಾಸೆ ಉಂಟಾಗಿದೆ. ಬಹು ನಿರೀಕ್ಷಿತ ಜಿಲ್ಲಾ ವಿಭಜನೆ ಹೋರಾಟ ಮುಂದುವರಿದಿದ್ದು ಸರ್ಕಾರದ ಮೇಲೆ ನಿರಂತರ ಒತ್ತಡ ಇದ್ದೇ ಇದೆ.