
ಸಿದ್ದು ಬಜೆಟ್ ನಲ್ಲಿ ಸಿಗುತ್ತಾ ಜಿಲ್ಲಾ ವಿಭಜನೆ ಸಿಹಿ…!

ಬೆಳಗಾವಿ : ದಶಕಗಳಿಂದ ಜನರ ಆಗ್ರಹವಾಗಿರುವ ಜಿಲ್ಲಾ ವಿಭಜನೆ ಕೂಗಿಗೆ ಈ ಬಾರಿ ಸಿಎಂ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಮುಕ್ತಿ ಸಿಗುತ್ತದೆಯಾ ಎಂಬ ಕಾತರತೆಯಲ್ಲಿ ಜನರಿದ್ದಾರೆ. ಬೆಳಗಾವಿ ಜಿಲ್ಲಾ ವಿಭಜನೆ ಕನಸು ನನಸಾಗುತ್ತದಾ ಎಂಬ ಪ್ರಶ್ನೆಯಲ್ಲಿ ಜನರಿದ್ದಾರೆ.
ಮಾರ್ಚ್ 7 ರಂದು ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 16 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬೆನ್ನಲ್ಲೇ ದಶಕಗಳಿಂದ ನಿರೀಕ್ಷೆಯ ಮೂಟೆ ಹೊತ್ತ ಜಿಲ್ಲಾ ಹೋರಾಟಗಾರು ಈ ಬಾರಿಯಾದರೂ ತಮ್ಮ ಬೇಡಿಕೆ ಈಡೇರುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.
ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಅನೇಕ ವರ್ಷಗಳಿಂದ ನಡೆಯುತ್ತಿದೆ. ಚಿಕ್ಕೋಡಿ ಜಿಲ್ಲೆಯನ್ನಾಗಿ ವಿಭಜನೆ ಮಾಡುವಂತೆ ಹೋರಾಟ ನಡೆಯುತ್ತಿವೆ. ಈ ಮಧ್ಯೆ ಅಥಣಿ, ಬೈಲಹೊಂಗಲ, ಗೋಕಾಕ್ ಜಿಲ್ಲೆಯಾಗಲಿ ಎಂಬ ಕೂಗು ಇದೆ. ಆದರೆ ಈವರೆಗಿನ ಸರ್ಕಾರಗಳು ಮನಸ್ಸು ಮಾಡಲಿಲ್ಲ.
ಸಧ್ಯ ರಾಜ್ಯದಲ್ಲಿ ಹೊಸ ಜಿಲ್ಲೆ ರಚನೆಗೆ ಸಾಕಷ್ಟು ಕೂಗು ಇದೆ.
ಯಾವ ಜಿಲ್ಲೆಗಳ ರಚನೆಗೆ ಹೆಚ್ಚಿದೆ ಕೂಗು?
ಬೆಳಗಾವಿ – ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ,
ತುಮಕೂರು – ತಿಪಟೂರು, ಮಧುಗಿರಿ
ಉತ್ತರ ಕನ್ನಡ – ಶಿರಸಿ
ಮೈಸೂರು – ಹುಣಸೂರು
ಶಿವಮೊಗ್ಗ – ಶಿಕಾರಿಪುರ, ಸಾಗರ
ದಕ್ಷಿಣ ಕನ್ನಡ – ಪುತ್ತೂರು
ಬಾಗಲಕೋಟೆ – ಜಮಖಂಡಿ
ವಿಜಯಪುರ – ಇಂಡಿ
ರಾಯಚೂರು – ಸಿಂಧನೂರು
ಕಲಬುರಗಿ – ಸೇಡಂ, ಶಹಾಪುರ
ಕೊಪ್ಪಳ – ಗಂಗಾವತಿ
ಇನ್ನೂ ರಾಜ್ಯ ವಿವಿಧ ಭಾಗಗಳಲ್ಲಿ ಹೊಸ ಜಿಲ್ಲೆಗಳ ರಚನೆಗೆ ಎಲ್ಲ ಕಡೆಯಿಂದ ಬೇಡಿಕೆಗಳು ಕೇಳಿ ಬರುತ್ತಿದೆ. ಆದರೆ, ಸರ್ಕಾರ ಮಾತ್ರ ಜಿಲ್ಲೆಗಳ ರಚನೆಗೆ ಮುಂದಾಗುತ್ತಿಲ್ಲ. ಹೊಸ ಜಿಲ್ಲೆ ರಚಿಸಿದರೆ ಆ ಜಿಲ್ಲೆಗೆ ಪ್ರತ್ಯೇಕ ಅನುದಾನ ನೀಡಬೇಕು, ಹೊಸ ಕಟ್ಟಡ, ಸಿಬ್ಬಂದಿ ಸೇರಿ ಎಲ್ಲವನ್ನೂ ಕೊಡಬೇಕಾಗುತ್ತದೆ.
ಇದಕ್ಕೆ ಭಾರೀ ಪ್ರಮಾಣದ ಹಣವನ್ನು ಮೀಸಲು ಇಡಬೇಕಾಗುತ್ತದೆ. ಹೊಸ ಜಿಲ್ಲೆಗಳನ್ನು ರಚಿಸಿದರೆ ಬೇರೆ ಕಡೆಯಿಂದಲೂ ಹೊಸ ಜಿಲ್ಲೆಗೆ ಬೇಡಿಕೆ ಬರುತ್ತದೆ ಎಂಬ ಕಾರಣಕ್ಕೆ ಸರ್ಕಾರ ಹೊಸ ರಚನೆಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.